ಹುಬ್ಬಳ್ಳಿ: ಬಡತನ ಮೆಟ್ಟಿನಿಂತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದು ಸರ್ಕಾರಿ ಕಾಲೇಜು ಎಂದು ಮೂಗು ಮುರಿಯುವವರ ನಡುವೆ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹುಬ್ಬಳ್ಳಿಯ ಗೋಪನಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನ ನಾಗವೇಣಿ ರಾಯಚೂರು ಐದನೇ ರ‍್ಯಾಂಕ್ ಪಡೆದವರು. ಕಲಾ ವಿಭಾಗದಲ್ಲಿ 600 ಅಂಕಗಳಿಗೆ 593 ಅಂಕ ಪಡೆದು ಈ ಸಾಧನೆ ಮಾಡಿದ್ದಾರೆ. ಕನ್ನಡ 99, ಹಿಂದಿ 96, ಇತಿಹಾಸ 99, ಭೂಗೋಳ ಶಾಸ್ತ್ರ 100, ರಾಜಶಾಸ್ತ್ರ 100 ಹಾಗೂ ಶಿಕ್ಷಣದಲ್ಲಿ 99 ಅಂಕಗಳೊಂದಿಗೆ ಶೇ.98.83 ಫಲಿತಾಂಶ ಪಡೆದಿದ್ದಾರೆ.
ನಾಗವೇಣಿ ಮನೆಯಲ್ಲಿನ ಬಡತನವನ್ನು ದಿಟ್ಟವಾಗಿ ಎದುರಿಸಿ ಈ ಸಾಧನೆ ಮಾಡಿದ್ದಾರೆ. ತಂದೆ ಆಂಥೋನಿ ರಾಯಚೂರು ವಿಕಲಚೇತನರಾಗಿದ್ದು, ಕೂಲಿ ಕೆಲಸ ಮಾಡುತ್ತಲೇ ಮಗಳಿಗೆ ಶಿಕ್ಷಣ ಕೊಡಿಸಿದ್ದಾರೆ. ತಾಯಿ ಸುಲೋಚನಾ ಗೃಹಿಣಿಯಾಗಿದ್ದು, ಅನಾರೋಗ್ಯದಿಂದ ಮಹಾರಾಷ್ಟ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆ ತಾಯಿಗೆ ಹೊರೆಯಾಗದ ನಾಗವೇಣಿ ಸರ್ಕಾರಿ ಸ್ಕಾಲರ್ಶಿಪ್ ಮೇಲೆಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಹಲವು ಸಂಸ್ಥೆಗಳೂ ಅವರಿಗೆ ಸಹಾಯ ಹಸ್ತ ನೀಡಿವೆ. ಎಸ್ಎಸ್ಎಲ್ಸಿಯಲ್ಲಿಯೂ ಶೇ.93ರಷ್ಟು ಫಲಿತಾಂಶ ಪಡೆದಿದ್ದರಿಂದ ಸರ್ಕಾರಿ ಶಿಷ್ಯವೇತನ ಪಡೆದುಕೊಂಡಿದ್ದರು. ಅಲ್ಲದೇ, ಕಾಲೇಜು ರಜಾ ದಿನಗಳಲ್ಲಿ ತಾನೂ ಕೂಡ ಕೆಲಸಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿದ್ದಾರೆ.
ಸಾಧನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಾಗವೇಣಿ, ”ರ‍್ಯಾಂಕ್ ಪಡೆದಿರುವುದು ತುಂಬಾ ಸಂತಸ ತಂದಿದೆ. ಫಸ್ಟ್ ರ‍್ಯಾಂಕ್ ಬಂದಿದರೆ ಮತ್ತಷ್ಟು ಖುಷಿಯಾಗುತ್ತಿತ್ತು. ತಂದೆ ಅಂಗವಿಕಲರಿದ್ದು, ಇಂದೂ ಕೂಡ ಕೆಲಸಕ್ಕೆ ಹೋಗಿದ್ದಾರೆ. ಶಿಕ್ಷಕರು ಕೂಡ ತುಂಬಾ ಸಹಕಾರ ನೀಡಿದ್ದಾರೆ” ಎಂದರು.