ಕೊಯಮತ್ತೂರು(ತಮಿಳುನಾಡು):: ಋತುಮತಿಯಾದ ಬಳಿಕ ಪರೀಕ್ಷೆ ಬರೆಯಲು ಶಾಲೆಗೆ ಬಂದ ಬಾಲಕಿಗೆ ಶಾಲಾ ಸಿಬ್ಬಂದಿಯು ತರಗತಿಯಿಂದ ಹೊರಗೆ ಪರೀಕ್ಷೆ ಬರೆಯಲು ಕೂರಿಸಿದ ಅಮಾನವೀಯ ಘಟನೆ ತಮಿಳುನಾಡಿನ ಕೊಯಮತ್ತೂರಿನ ಕಿನಾಥುಕಡವು ಬಳಿಯ ಸೆಂಗುಟ್ಟೈ ಪಾಳೆಯಂನಲ್ಲಿ ವರದಿಯಾಗಿದೆ.
ಈ ಘಟನೆ ವಿರೋಧಿಸಿ, ಬಾಲಕಿಯ ತಾಯಿ ವಿಡಿಯೋ ಮಾಡಿದ್ದು, ವೈರಲ್ ಆಗಿದೆ. ಈ ಬೆನ್ನಲ್ಲೇ ಶಾಲೆಯ ನಡೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ ಸ್ವಾಮಿ ಚಿದ್ಭಾವಾನಂದ ಮೆಟ್ರಿಕ್ಯುಲೇಷನ್ ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ. ಶಾಲೆಯಲ್ಲಿ ನಡೆಯುತ್ತಿರುವ ತಾರತಮ್ಯದ ಮತ್ತು ಕೆಳಮಟ್ಟದ ನಡವಳಿಕೆ ಕುರಿತು ತನಿಖೆಗೆ ನಡೆಸಲು ಆದೇಶಿಸಲಾಗಿದೆ.
ಘಟನೆ ವಿವರ: ವಿದ್ಯಾರ್ಥಿನಿಯ ತಾಯಿ ಹೇಳುವಂತೆ, ಬಾಲಕಿಯು ಇತ್ತೀಚೆಗಷ್ಟೆ ಋತುಮತಿಯಾಗಿದ್ದಳು. ಶಾಲಾ ವಾರ್ಷಿಕ ಪರೀಕ್ಷೆ ಬರೆಯಲು ಹೋದ ಆಕೆಯನ್ನು ವಿದ್ಯಾರ್ಥಿಗಳ ಜೊತೆಗೆ ಕುಳಿತುಕೊಳ್ಳಲು ಅನುಮತಿ ನೀಡಿಲ್ಲ. ಶಾಲಾ ಪ್ರಾಂಶುಪಾಲರು ಶಿಕ್ಷಕರಿಗೆ ಈ ಕುರಿತು ಸೂಚನೆ ನೀಡಿದ್ದು, ತರಗತಿಯಿಂದ ಹೊರಗೆ ಪರೀಕ್ಷೆ ಬರೆಯುವಂತೆ ಸೂಚಿಸಿದ್ದರು.
ಬಾಲಕಿ ಪರೀಕ್ಷೆ ಬರೆದ ಬಳಿಕ ಮನೆಗೆ ಹಿಂದಿರುಗಿದಾಗ ನಡೆದ ಘಟನೆಯನ್ನು ತಾಯಿಗೆ ವಿವರಿಸಿದ್ದಾಳೆ. ಮಗಳ ಜೊತೆಗೆ ಶಾಲೆಗೆ ಹೋದಾಗ ಆ ರೀತಿ ತಾರತಮ್ಯ ನಡೆಸುತ್ತಿರುವುದು ಕಂಡುಬಂದಿದೆ ಎಂದು ವಿಡಿಯೋ ರೆಕಾರ್ಡ್ ಮಾಡಿದ್ದು, ವೈರಲ್ ಆಗಿದೆೆ. ಶಾಲಾ ಸಿಬ್ಬಂದಿಯ ಅಮಾನವೀಯ ನಡೆ ಖಂಡಿಸಿ ವಿದ್ಯಾರ್ಥಿನಿಯ ತಾತ ಕೂಡ ಉಪಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಘಟನೆ ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಶಾಲಾ ಆಡಳಿತ ಮಂಡಳಿ, ಸೋಂಕು ಅಥವಾ ಅನಾನೂಕುಲವಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಆಕೆಯನ್ನು ಪ್ರತ್ಯೇಕವಾಗಿ ಕೂರಿಸುವಂತೆ ಮನವಿ ಮಾಡಿದ್ದರು ಎಂದಿದ್ದಾರೆ. ಆದರೆ, ಈ ಆರೋಪವನ್ನು ಪೋಷಕರು ನಿರಾಕರಿಸಿದ್ದಾರೆ.
ಶಾಲೆಗೆ ಭೇಟಿ ನೀಡಿದ ಪೊಲ್ಲಾಚಿ ಎಎಸ್ಪಿ ಸೃಷ್ಟಿ ಸಿಂಗ್, ತನಿಖೆಗೆ ಕೈಗೊಂಡಿದ್ದಾರೆ. ಈ ಸಂಬಂಧ ತಮಿಳುನಾಡು ಖಾಸಗಿ ಶಾಲಾ ನಿರ್ದೇಶಕ ಪಳನಿಸ್ವಾಮಿ ಅವರು ಕೂಡ ತನಿಖೆಗೆ ಆದೇಶಿಸಿದ್ದು, ಕೊಯಮತ್ತೂರು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕೊಯಮತ್ತೂರು ಜಿಲ್ಲಾ ಶಿಕ್ಷಣ ಅಧಿಕಾರಿಗಳು ಶಾಲಾ ಪ್ರಾಂಶುಪಾಲರನ್ನು ಅಮಾನತು ಮಾಡಿ, ಇತರ ಸಿಬ್ಬಂದಿಯ ವಿರುದ್ಧವೂ ವಿಚಾರಣೆ ಕೈಗೊಂಡಿದ್ದಾರೆ.
ಮಕ್ಕಳ ರಕ್ಷಣೆ ಮತ್ತು ಗೌಪ್ಯತೆ ಕಾನೂನುಗಳಿಗೆ ಅನುಗುಣವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ರಾಪ್ತ ವಯಸ್ಕರ ವಿಡಿಯೋಗಳನ್ನು ಹಂಚಿಕೊಳ್ಳುವ ಅಥವಾ ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.