ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನೋತ್ಸವಕ್ಕೆ ದಿನಗಣನೆ ಶುರುವಾಗಿದೆ. ವಿವಿಧೆಡೆ ವಿಭಿನ್ನವಾಗಿ ಹಬ್ಬಾಚರಿಸಲು ಕನ್ನಡಿಗರು ಸಜ್ಜಾಗಿದ್ದಾರೆ. ಬಾಲ್ಯದಲ್ಲೇ ನಟನೆ ಶುರು ಮಾಡಿದ ಈ ಕಲಾವಿದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದರು. ಕಮರ್ಷಿಯಲ್ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸಂದೇಶಗಳುಳ್ಳ ಅನೇಕ ಚಿತ್ರಗಳನ್ನು ಚಂದನವನಕ್ಕೆ ಕೊಟ್ಟು ಹೋಗಿದ್ದಾರೆ. ಇದೇ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನೋತ್ಸವ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಸಂದರ್ಭ ಸಾಮಾಜಿಕ ಸಂದೇಶ ಸಾರುವ ಅಪ್ಪು ಚಿತ್ರಗಳ ಒಂದು ಮೆಲುಕು ನೋಟ.
ಅರಸು: ಪುನಿತ್ ಅಭಿನಯದ ಚಿತ್ರಗಳಲ್ಲಿ ‘ಅರಸು’ ಕೂಡ ಒಂದು. ಚಿತ್ರದಲ್ಲಿ ನಿಜಕ್ಕೂ ಅರಸನಾಗಿದ್ದ ಪುನಿತ್ ಗೆ ಎಂಜಾಯ್ ಮಾಡುವುದೇ ಕಾಯಕವಾಗಿತ್ತು. ಜೀವನ ಎಂದರೆ ಏನು? ಜೀವನದ ಜವಾಬ್ದಾರಿ ಎಂದರೆನೂ ತಿಳಿಯದ ಪುನಿತ್ ನಂತರ ಪ್ರೀತಿಯ ಪರಾಕಾಷ್ಟೆಯಲ್ಲಿ ಬಿದ್ದು ಓರ್ವ ಜವಾಬ್ದಾರಿ ವ್ಯಕ್ತಿಯಾಗಿ ರೂಪಿತನಾಗುತ್ತಾನೆ. ಪುನಿತ್ ಈ ಪಾತ್ರದಿಂದ ಲಕ್ಷಾಂತರ ಜನ ಜವಾಬ್ದಾರಿ ಅರಿತಿರಲೂ ಸಾಕು. ಇಂಥ ಉತ್ತಮ ಚಿತ್ರಕ್ಕೆ ಸಾಕ್ಷಿಯಾದ ಪುನಿತ್ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರ ನೀಡಿದ್ದಾರೆ.
ಗಂಧದ ಗುಡಿ (2022): ಪುನೀತ್ ರಾಜ್‌ಕುಮಾರ್ ಅವರ ಕೊನೆ ಪ್ರಾಜೆಕ್ಟ್ ‘ಗಂಧದ ಗುಡಿ’. ಅವರು ಇಹಲೋಕ ತ್ಯಜಿಸಿದ ಬಳಿಕ ತೆರೆಕಂಡ ಚಿತ್ರವಿದು. ಕರುನಾಡಿನ ವನ್ಯಜೀವಿ, ಪ್ರಾಕೃತಿಕ ಸಂಪತ್ತನ್ನು ತೆರೆ ಮೇಲೆ ಬಹಳ ಆಕರ್ಷಕವಾಗಿ ಪ್ರದರ್ಶಿಸಿದ ಸಾಕ್ಷ್ಯ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಯುವರತ್ನ (2021): ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ ‘ಯುವರತ್ನ’ ಸಿನಿಮಾ 2021ರ ಏಪ್ರಿಲ್ 1ರಂದು ಚಿತ್ರಮಂದಿರ ಪ್ರವೇಶಿಸಿತ್ತು. ಶಿಕ್ಷಕನ ಪಾತ್ರದಲ್ಲಿ ಪುನೀತ್ ಅವರ ಅಭಿನಯ ಬಹಳ ಅಮೋಘವಾಗಿತ್ತು. ವಿದ್ಯಾರ್ಥಿಗಳ ಭವಿಷ್ಯವನ್ನಾಧರಿಸಿ ಬಂದ ಈ ಚಿತ್ರ ಯಶಸ್ವಿಯಾಗಿದೆ.
ರಾಜಕುಮಾರ (2017): ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರ ಪೋಷಕರನ್ನು ಮಕ್ಕಳು ಅನಾಥಾಶ್ರಮಗಳಿಗೆ ಸೇರಿಸುವ ಕಥಾಹಂದರವನ್ನೊಳಗೊಂಡಿತ್ತು. 2017ರ ಮಾರ್ಚ್ 24ರಂದು ಬಿಡುಗಡೆಯಾದ ಈ ಸಿನಿಮಾ ವಯಸ್ಸಾದ ಮೇಲೆ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸಬೇಡಿ ಎಂಬ ಮನಮುಟ್ಟುವ ಸಂದೇಶವನ್ನೊಳಗೊಂಡಿತ್ತು.
ಹೀಗೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆ ಜೊತೆಗೆ ಸಮಾಜಕ್ಕೊಂದು ಸಂದೇಶ ಸಾರುವ ಸಿನಿಮಾಗಳು ಪುನೀತ್ ರಾಜ್‌ಕುಮಾರ್ ಅವರಿಂದ ಬಂದಿದೆ. ತಮ್ಮ ಅತ್ಯುತ್ತಮ ಚಿತ್ರಗಳ ಮೂಲಕ ಅಭಿಮಾನಿಗಳ ಹೃದಯಲ್ಲಿ ರಿಯಲ್ ಹೀರೋ ಆಗಿ ಉಳಿದುಕೊಂಡಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ದಿ.ಅಪ್ಪು ಓರ್ವ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದಾರೆ.




