ಚಂದಿಗಢ: ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ರಾಜಸ್ತಾನ ರಾಯಲ್ಸ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. ಇದರಿಂದಾಗಿ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 18 ನೇ ಪಂದ್ಯದಲ್ಲಿ 4 ವಿಕೆಟ್ ಗೆ 205 ರನ್ ಗಳಿಸಿ ಎದುರಾಳಿ ತಂಡಕ್ಕೆ 206 ರನ್ ಗಳ ಗೆಲುವಿನ ಗುರಿ ನೀಡಿತು.
ಮಹಾರಾಜ ಯಧುವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ 10.2 ಓವರುಗಳಲ್ಲಿ 89 ರನ್ ಗಳ ಪಾಲುಗಾರಿಕೆ ನಿರ್ವಹಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಎಡಗೈ ಆರಂಭ ಆಟಗಾರ ಜೈಸ್ವಾಲ್ 45 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 38 ರನ್ ಗಳಿಸಿದರು. ನಂತರ ನಾಯಕ ರಿಯಾನ್ ಪರಾಗ್ ಕೂಡ ಸ್ಥಿತಿಗತಿ ಅನುಗುಣವಾಗಿ ಬಿರುಸಿನ ಆಟಕ್ಕೆ ಇಳಿದರು. ರಿಯಾನ್ ಪರಾಗ್ 25 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 43 ರನ್ ಗಳಿಸಿದರು.