——————-ಐಪಿಎಲ್ ಕ್ವಾಲಿಫಾಯರ್-1
ಚಂದಿಗಢ: ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕ್ವಾಲಿಪಾಯರ್-1 ಪಂದ್ಯದಲ್ಲಿ ಇಂದು ಮುಖಾಮುಖಿಯಾಗಲಿದ್ದು, ಎರಡೂ ತಂಡಗಳಿಗೂ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿದೆ.
ಇಲ್ಲಿನ ಮಹಾರಾಜಾ ಯಧುವೀಂದ್ರ ಸಿಂಗ್ ಮೈದಾನದಲ್ಲಿ ಇಂದು ಸಾಯಂಕಾಲ 7 :30 ಕ್ಕೆ ಪಂದ್ಯ ನಡೆಯಲಿದೆ. ಈ ಮೈದಾನದಲ್ಲಿ ಸರಾಸರಿ ರನ್ ಮೊತ್ತ 173 ರನ್ ಗಳಾಗಿದ್ದು, ಟಾಸ್ ಗೆದ್ದ ತಂಡ ಮೊದಲು ಬ್ಯಾಟ್ ಮಾಡುವ ಅವಕಾಶ ದಟ್ಟವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಪಂದ್ಯಾವಳಿಯ ಗಮನಾರ್ಹ ಸಾಧನೆ ತೋರಿದ್ದು, ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆಯನ್ನಂತೂ ಹುಟ್ಟಿಸಿದೆ. 2009, 2001, 2016 ರಲ್ಲಿ ಫೈನಲ್ ವರೆಗೆ ಬಂದು ಮುಗ್ಗರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪ್ರೇಕ್ಷಕರಿಗೆ ತೀರಾ ನಿರಾಸೆ ಮೂಡಿಸಿತ್ತು. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡವು 2014 ರಲ್ಲಿ ರನ್ನರ್ಸ್ ಅಪ್ ಗೆ ತೃಪ್ತಿ ಪಟ್ಟುಕೊಂಡಿತ್ತು.
ಕಾಗದದ ಮೇಲೆ ಎರಡೂ ತಂಡಗಳು ಬಲಾಢ್ಯ ತಂಡಗಳಾಗಿವೆ. ಜೊತೆಗೆ ಈ ಪಂದ್ಯಾವಳಿಯಲ್ಲಿ ನಿರಂತರ ಉತ್ತಮ ಸಾಧನೆ ತೋರಿದ್ದರಿಂದಲೇ ಉಭಯ ತಂಡಗಳು ಕ್ವಾಲಿಪಾಯರ್ ಹಂತಕ್ಕೆ ಬಂದು ನಿಂತಿವೆ. ಈ ಹಿಂದಿನ ದಾಖಲೆಗಳ ಪ್ರಕಾರ ಪಂಜಾಬ್ ಕಿಂಗ್ಸ್ ಕೊದಲೆಳೆಯಷ್ಟು ಹೆಚ್ಚಿನ ಮನೋಬಲ ಹೊಂದಿದೆ. ಕಾರಣ ಪಂಜಾಬ್ ಕಿಂಗ್ಸ್ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 18- 17 ರ ಮುನ್ನಡೆ ಹೊಂದಿದೆ. ಏನೇ ಆಗಲಿ ಎರಡೂ ಬಲಾಢ್ಯ ತಂಡಗಳ ಹಣಾಹಣಿ ತೀವ್ರ ಕುತೂಹಲವನ್ನಂತೂ ಉಳಿಸಿಕೊಂಡಿದೆ.




