ಕರುನಾಡಿನ ಹೆಸರಾಂತ ಕುಟುಂಬದಿಂದ ಬಂದಿದ್ದರೂ ತಮ್ಮ ಸರಳ ವ್ಯಕ್ತಿತ್ವದಿಂದ ಕೋಟ್ಯಂತರ ಜನಮನ ಗೆದ್ದ ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆ ಅತಿ ಶೀಘ್ರದಲ್ಲೇ ಬರಲಿದೆ. ನಗುಮೊಗದ ಒಡೆಯನ 50ನೇ ಜನ್ಮದಿನದ ಸಂದರ್ಭ ಈ ಶುಭ ಸುದ್ದಿಯನ್ನು ತಂಡ ಹಂಚಿಕೊಂಡಿದೆ. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಜೀವನ ಚರಿತ್ರೆಯ ಒಂದು ಫೋಟೋ ಹಂಚಿಕೊಂಡು ಮಾಹಿತಿ ಒದಗಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಇಲ್ಲಿ ಲೇಖಕರಾಗಿರೋದು ವಿಶೇಷ.
1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಜನಿಸಿದ ಪುನೀತ್ ರಾಜ್‌ಕುಮಾರ್ ಮಗುವಾಗಿರುವಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ, ಬಾಲನಟನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ನಟಸಾರ್ವಭೌಮನ ಕಿರಿಯ ಪುತ್ರನಿಗೆ ನಟನೆ ರಕ್ತದಲ್ಲೇ ಬಂದಿದೆ ಎಂಬುದು ಅಭಿಮಾನಿಗಳ ಪ್ರಶಂಸೆ. ಬಾಲನಟನಾಗಿ ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. 2002ರಲ್ಲಿ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದ ಅಪ್ಪು ಅತಿ ಕಡಿಮೆ ಅವಧಿಯಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದರು. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಆದ್ರೆ 2021ರಲ್ಲಿ ಅವರ ಅಕಾಲಿಕ ನಿಧನದಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು.
2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಕಳೆದ ದಿನ, ಮಾರ್ಚ್ 17ರಂದು ಪವರ್ ಸ್ಟಾರ್ನ 50ನೇ ಜನ್ಮದಿನವನ್ನು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಆಚರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ರಾಜ್ ಕುಟುಂಬ ಮತ್ತು ಅಭಿಮಾನಿಗಳು ಸಮಾಧಿ ಬಳಿ ಆಗಮಿಸಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಮುಂಜಾನೆ, ಅಪ್ಪು ಅವರಿಗೆ ವಿಶೇಷವಾಗಿ ಶುಭ ಕೋರಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಂಜೆ ಪುನೀತ್ ರಾಜ್‌ಕುಮಾರ್ ಅವರ ಆ್ಯಪ್ ಶೀಘ್ರದಲ್ಲೇ ಲಾಂಚ್ ಆಗಲಿದೆ ಎಂಬ ಗುಡ್ ನ್ಯೂಸ್ ಕೊಟ್ಟರು. ಇದರ ಜೊತೆಗೆ, ಶೀಘ್ರದಲ್ಲೇ ‘ಅಪ್ಪು’-ಭಾವನಾತ್ಮಕ ಜೀವನಚರಿತ್ರೆ ಬರಲಿದೆ ಎಂಬ ಸಂತಸದ ವಿಚಾರವನ್ನೂ ಹಂಚಿಕೊಂಡಿದ್ದಾರೆ.