ತುಮಕೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಚುನಾವಣೆ ಪತ್ರಿಕಾಭವನದಲ್ಲಿ ನಡೆಯಿತು. ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ, ಜಿಲ್ಲಾಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರು ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ಮತದಾನ ಶಾಂತಿಯುತವಾಗಿ ನಡೆಯಿತು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ 4 ಮಂದಿ, ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ 4 ಮಂದಿ, ಮೂರು ಉಪಾಧ್ಯಕ್ಷ ಸ್ಥಾನಕ್ಕೆ 10 ಮಂದಿ, ಒಂದು ಪ್ರಧಾನ ಕಾರ್ಯದರ್ಶಿ ಹುದ್ದೆಗೆ 4 ಮಂದಿ, ಮೂವರು ಕಾರ್ಯದರ್ಶಿ ಸ್ಥಾನಕ್ಕೆ 7 ಮಂದಿ, ಒಂದು ಖಜಾಂಚಿ ಸ್ಥಾನಕ್ಕೆ 3 ಮಂದಿ ಹಾಗೂ 15 ಮಂದಿ ನಿರ್ದೇಶಕರ ಆಯ್ಕೆಗೆ 39 ಮಂದಿ ಸ್ಪರ್ಧಿಸಿದ್ದರು. ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಬಿರುಸಿನಿಂದ ತೀವ್ರ ಪೈಪೋಟಿಯಿಂದ ಕೂಡಿದ ಚುನಾವಣೆ ಇದಾಗಿತ್ತು. ಚುನಾವಣೆಯಲ್ಲಿ ಪತ್ರಕರ್ತರ ಕುಟುಂಬ, ಸ್ವಾಭಿಮಾನಿ ಪತ್ರಕರ್ತರು, ಸಮಾನ ಮನಸ್ಕ ಪತ್ರಕರ್ತರು ಎಂಬ ಮೂರು ತಂಡಗಳ ಜೊತೆಗೆ ತಂಡದೊಡನೆ ಗುರುತಿಸಿಕೊಳ್ಳದ ಕೆಲವು ಪಕ್ಷೇತರ ಅಭ್ಯರ್ಥಿಗಳು ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದರು. ಮೂರೂ ತಂಡಗಳು ತಮ್ಮ ತಂಡದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪತ್ರಕರ್ತ ಮತದಾರ ಮನವೊಲಿಸಲು ಹರಸಾಹಸ ಪಟ್ಟಿದ್ದರು.
ಭಾನುವಾರ ನಡೆದ ಚುನಾವಣೆಯಲ್ಲಿ ಕಳೆದ 6 ವರ್ಷದಿಂದ ತುಮಕೂರು ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಚಿ.ನಿ.ಪುರುಷೋತ್ತಮ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಯೋಗೇಶ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಇ.ರಘುರಾಮ್, ಉಪಾಧ್ಯಕ್ಷರಾಗಿ ಸಿ.ಜಯಣ್ಣ, ದೊಡ್ಡಗುಣಿ ಪ್ರಸನ್ನ, ದಶರಥ, ಖಜಾಂಚಿಯಾಗಿ ಸತೀಶ್ ಹಾರೋಗೆರೆ, ಕಾರ್ಯದರ್ಶಿಗಳಾಗಿ ರಂಗಧಾಮಯ್ಯ, ಯಶಸ್ ಪದ್ಮನಾಭ, ನಂದೀಶ್, ನಿರ್ದೇಶಕರಾಗಿ ಮಾರುತಿ ಗಂಗಹನುಮಯ್ಯ, ಜಗನ್ನಾಥ್, ಪುರುಷೋತ್ತಮ್, ಮಧು, ಜಯಣ್ಣ ಬೆಳಗೆರೆ, ಅಶೋಕ್, ಮಂಜುನಾಥ್ ಗೌಡ, ಶ್ರೀವತ್ಸ, ಹೇಮಂತ್, ಸುಪ್ರತೀಕ್, ಕಣಿಮಯ್ಯ, ರಘು, ವಿಜಯ್, ಮಾರುತಿ ಪ್ರಸಾದ್, ಯೋಗೇಶ್ ಅವರುಗಳು ಆಯ್ಕೆಯಾದರು.
ತಮ್ಮ ತಮ್ಮ ಅಭ್ಯರ್ಥಿಯ ಗೆಲುವಿನ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿಜೇತ ಅಭ್ಯರ್ಥಿಗಳನ್ನು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಅಮೃತವಾಣಿ ಪತ್ರಿಕೆಯ ಸಂಪಾದಕ, ಮಾಜಿ ಶಾಸಕ ಗಂಗಹನುಮಯ್ಯ, ಅಮೃತವಾಣಿ ಪತ್ರಿಕೆಯ ಸಹ ಸಂಪಾದಕಿ ಕಮಲಾ ಗಂಗಹನುಮಯ್ಯ, ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕಾಮರಾಜು ಸೇರಿದಂತೆ ವಿವಿಧ ತಾಲ್ಲೂಕುಗಳ ಪತ್ರಕರ್ತರು ಪುಷ್ಪಾಹಾರ ಹಾಕಿ ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್




