ಗ್ಲ್ಯಾಮರಸ್ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ರಾಗಿಣಿ ದ್ವಿವೇದಿ ಅವರೀಗ ಕಂಟೆಂಟ್ ಆಧಾರಿತ ಸಿನಿಮಾಗಳತ್ತ ಒಲವು ತೋರುತ್ತಿದ್ದಾರೆ. ಹೌದು, ಇತ್ತೀಚಿನ ದಿನಗಳಲ್ಲಿ ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಬಯಸುತ್ತಿರುವ ರಾಗಿಣಿ ದ್ವಿವೇದಿ ಅವರ ಮುಂದಿನ ಸಿನಿಮಾದ ಹೆಸರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’. ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾದ ಧ್ವನಿಮುದ್ರಣ ಕಾರ್ಯವನ್ನು ಆರಂಭಿಸಿದ್ದ ಚಿತ್ರತಂಡ, ಇದೀಗ ಹಾಡುಗಳ ಕೆಲಸವನ್ನು ಪೂರ್ಣಗೊಳಿಸಿ, ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದೆ.

ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ, ನಟ-ರಾಜಕಾರಣಿ ಕುಮಾರ್ ಬಂಗಾರಪ್ಪ, ಹಿರಿಯ ನಟ ದೊಡ್ಡಣ್ಣ ಸೇರಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ, ಹಿರಿಯ ನಟ ಶ್ರೀನಾಥ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ರು. ಸಚಿವ ಕೆ.ಹೆಚ್.ಮುನಿಯಪ್ಪ, ಶಾಸಕ ಎಲ್.ಶಿವರಾಮೇಗೌಡ, ಕರ್ನಾಟಕ ರಾಜ್ಯ ಸರ್ಕಾರದ ಪಡಿತರ ವಿತರಕರ ಒಕ್ಕೂಟ ಅಧ್ಯಕ್ಷ ಟಿ.ಕೃಷ್ಣಪ್ಪ, ನಿರ್ಮಾಪಕ ಭಾ.ಮ.ಹರೀಶ್, ಭಾ.ಮ.ಗಿರೀಶ್ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.





