ಬೆಂಗಳೂರು : ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿಲ್ಲವೋ ಅವರ ಹೃದಯ ಗೆಲ್ಲುವ ಕೆಲಸ ಮಾಡುವಂತೆ ರಾಹುಲ್ ಗಾಂಧಿ ಅವರು ಕಿವಿ ಮಾತು ಹೇಳಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ಇಂದು ನೂತನ ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.ಕನ್ನಡಿಗರ ಹಕ್ಕಿಗಾಗಿ ಸಂಸತ್ನಲ್ಲಿ ಧ್ವನಿಯಾಗಿರುವಂತೆ ಹಾಗೂ ಹೆಚ್ಚು ಸಮಯ ಕ್ಷೇತ್ರದಲ್ಲೇ ಇರುವಂತೆ ಕಿವಿ ಮಾತು ಹೇಳಿದ್ದಾರೆ.
ಸೋತ ಅಭ್ಯರ್ಥಿಗಳೂ ಕೂಡ ಕ್ಷೇತ್ರದಲ್ಲೇ ಇದ್ದು ಜನರ ನೋವಿಗೆ ಸ್ಪಂದಿಸುವಂತೆ ತಿಳಿಸಿದ್ದಾರೆ. ಬಹು ಮುಖ್ಯವಾಗಿ ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿಲ್ಲವೋ ಅವರ ಹೃದಯ ಗೆಲ್ಲುವ ಕೆಲಸ ಮಾಡುವಂತೆ ರಾಹುಲ್ ಗಾಂಧಿ ಅವರು ಕಿವಿ ಮಾತು ಹೇಳಿದ್ದಾರೆ. ರಾಜ್ಯದ ಸಚಿವರನ್ನೂ ಕೂಡ ಭೇಟಿಯಾಗಿ ಕೆಲವು ಕ್ಷೇತ್ರಗಳಲ್ಲಿ ಸೋಲಿಗೆ ಕಾರಣವೇನು ಎಂಬ ಮಾಹಿತಿ ಪಡೆದರು.
ಸದ್ಯದಲ್ಲೇ ಒಂದು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದಕ್ಕೆ ಐದೂ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿದ್ದು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಈ ಭಾಗಕ್ಕೆ ಸಾಕಷ್ಟು ಇರುವುದೇ ಗೆಲುವಿಗೆ ಕಾರಣ. ಇನ್ನು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಕ್ಷೇತ್ರಗಳ ವರದಿ ನೀಡುವಂತೆ ಕೇಳಿದ್ದು, ಸದ್ಯದಲ್ಲೇ ವರದಿ ನೀಡುತ್ತೇವೆ ಎಂದು ತಿಳಿಸಿದೆ ಎಂದು ಡಿಕೆಶಿ ಹೇಳಿದರು.