ಬೆಂಗಳೂರು: ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ದೆಹಲಿ ಕ್ಯಾಪಿಟಲ್ಸ್ ತಂಡ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಗಳ ಸುಲಭ ಗೆಲುವು ಪಡೆಯಲು ಯಶಸ್ವಿಯಾಯಿತು.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಗೆ 163 ರನ್ ಗಳಿಸಿತು. ಸುಲಭದ ಗುರಿ ಬೆನ್ನಟ್ಟಿದ ದೆಹಲಿ ಕ್ಯಾಪಿಟಲ್ಸ್ ತಂಡ 17.5 ಓವರುಗಳಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡು 169 ರನ್ ಗಳಿಸಿ ಸುಲಭವಾಗಿ ಗೆದ್ದಿತು.
ಕೆ.ಎಲ್. ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಅಲ್ಲದೇ ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾದರು. ಟ್ರಿಸ್ಟಾನ್ ಸ್ಟುಬಾಸ್ 23 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 38 ರನ್ ಗಳಿಸಿ ಕೆ.ಎಲ್. ರಾಹುಲ್ ಗೆ ಉತ್ತಮ ಬೆಂಬಲ ನೀಡಿದರು.