Ad imageAd image

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಕಾಂಗ್ರೆಸ್ಸಿಗ ಗಂಗಾಧರಗೌಡ ವಿಧಿವಶ

Bharath Vaibhav
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಕಾಂಗ್ರೆಸ್ಸಿಗ ಗಂಗಾಧರಗೌಡ ವಿಧಿವಶ
WhatsApp Group Join Now
Telegram Group Join Now

ತುರುವೇಕೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ, ಹಿರಿಯ ಕಾಂಗ್ರೆಸ್ಸಿಗ ದಂಡಿನಶಿವರದ ಡಿ.ಎಸ್.ಗಂಗಾಧರಗೌಡರು ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಗಳು, ಅಳಿಯ, ಪುತ್ರ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ನೇರ, ನಿಷ್ಠುರ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿ, ಕಲೆ, ಸಾಹಿತ್ಯ, ಜಾನಪದ, ನಾಟಕ, ಚಲನಚಿತ್ರ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ತುರುವೇಕೆರೆ ತಾಲ್ಲೂಕು ಬೋರ್ಡ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಗಂಗಾಧರಗೌಡರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಾಲದಿಂದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ದುಡಿದ ಗಂಗಾಧರಗೌಡರಿಗೆ ವಿಧಾನಸಭೆಗೆ ಸ್ಪರ್ಧಿಸಿ ಶಾಸಕರಾಗಬೇಕೆಂಬ ಅಧಮ್ಯ ಬಯಕೆಯಿತ್ತು. ಆದರೆ ಪಕ್ಷದ ನಿಷ್ಠಾವಂತರೆಂದು ಗುರುತಿಸಿಕೊಂಡಿದ್ದರೂ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ಸಿಗನಾಗಿ ದುಡಿದರೂ ಒಮ್ಮೆಯೂ ಪಕ್ಷದ ಟಿಕೆಟ್ ದೊರೆಯಲಿಲ್ಲ. ಗಂಗಾಧರಗೌಡರ ಪಕ್ಷನಿಷ್ಠೆ ಗುರುತಿಸಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ಗೆ ಬರುವಂತೆ ಆಹ್ವಾನಿಸಿದರೂ ಪಕ್ಷ ತೊರೆಯದೆ ಕೊನೆವರೆಗೂ ಕಾಂಗ್ರೆಸ್ಸಿನಲ್ಲೇ ಉಳಿದರು. ಕಾಂಗ್ರೆಸ್ ಪಕ್ಷದ ತಾಲ್ಲೂಕು ಉಪಾಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಇದಲ್ಲದೆ ಜಾನಪದ ಕಲೆಯಾದ ಸೋಮನ ಕುಣಿತದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಗಂಗಾಧರಗೌಡರು ರಾಜ್ಯ ಪರಿಸರ ಮಾಲಿನ್ಯ ಮಂಡಲಿಯ ಸದಸ್ಯರಾಗಿ, ತುರುವೇಕೆರೆ ತಾಲ್ಲೂಕು ಬೋರ್ಡ್ ಮಾಜಿ ಸದಸ್ಯರಾಗಿ, ತುರುವೇಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ತುಮಕೂರು ಕುವೆಂಪು ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾಗಿ, ತಿಪಟೂರು ಕನ್ನಡ ಕುವರರ ಕೂಟದ ಅಧ್ಯಕ್ಷರಾಗಿ, ಕಲ್ಪತರು ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ, ಜಾಲಿ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿ, ದಂಡಿನಶಿವರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಸ್ವರ್ಣಶ್ರೀ ಯಕ್ಷಗಾನ ಕಲಾ ಶಾಲೆಯ ಅಧ್ಯಕ್ಷರಾಗಿ, ಉದಯರವಿ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿ, ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷರಾಗಿ, ದಂಡಿನಶಿವರ ಶ್ರೀ ಹೊನ್ನಾದೇವಿ ದೇವಾಲಯದ ಧರ್ಮದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಕಲೆ, ಸಾಹಿತ್ಯ, ಜಾನಪದ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಗಂಗಾಧರಗೌಡರಿಗೆ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಪರಿಷತ್ ಪ್ರಶಸ್ತಿ ದೊರೆತಿತ್ತು.

ಜನಾನುರಾಗಿಯಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗಂಗಾಧರಗೌಡರು ಇಂದು ಬೆಳಗಿನ ಜಾವ ವಿಧಿವಶರಾಗಿದ್ದು, ಅವರ ನಿಧನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಹೆಚ್.ಬಿ.ನಂಜೇಗೌಡ, ಎಸ್.ರುದ್ರಪ್ಪ, ಎಂ.ಡಿ.ಲಕ್ಷ್ಮೀನಾರಾಯಣ್, ಜಿಪಂ ಮಾಜಿ ಸದಸ್ಯ ಚೌದ್ರಿ ರಂಗಪ್ಪ, ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕಲಾವಿದರ ಒಕ್ಕೂಟ, ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!