Ad imageAd image

ರಾಜ್ಯದಲ್ಲಿ ರಾಮ ರಾಜ್ಯ ಕನಸು ನನಸಾಗುತ್ತದೆ : ಕೆ. ಎಚ್ ಮುನಿಯಪ್ಪ 

Bharath Vaibhav
ರಾಜ್ಯದಲ್ಲಿ ರಾಮ ರಾಜ್ಯ ಕನಸು ನನಸಾಗುತ್ತದೆ : ಕೆ. ಎಚ್ ಮುನಿಯಪ್ಪ 
WhatsApp Group Join Now
Telegram Group Join Now

ಬೆಂಗಳೂರು : ರಾಷ್ಟ್ರದ ಸಾರ್ವಭೌಮತ್ವವನ್ನು ಗೌರವಿಸುವ ಮತ್ತು ದೇಶದ ಎಲ್ಲಾ ನಾಗರಿಕರು ಸಮಾನ ಶಿಕ್ಷಣ, ಧಾರ್ಮಿಕ ಹಕ್ಕು, ಮೂಲಭೂತ ಹಕ್ಕುಗಳನ್ನು ಪಡೆದು ನಾವೆಲ್ಲ ಸರ್ವಸ್ವತಂತ್ರರು ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದೇವೆ ಎಂದು ಘೋಷಿಸಿಕೊಂಡ ದಿನವನ್ನು ನಾವು “ಗಣರಾಜ್ಯೋತ್ಸವ ದಿನ” ಎಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ.

2. ಭಾರತೀಯ ಸ್ವಾತಂತ್ರ್ಯ ಚಳವಳಿ ಜನವರಿ-26, 1929 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯವನ್ನು ಗುರಿಯಾಗಿಸಿಕೊಂಡಿತು. ಅಂದು ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ದಿನವನ್ನು ಪೂರ್ಣ ಸ್ವರಾಜ್ ದಿನವೆಂದು ಘೋಷಿಸಲಾಯಿತು. ಅದರ ನೆನಪಾಗಿ ಭಾರತ ಸಂವಿಧಾನವನ್ನು ಜನವರಿ-26 ಅನ್ನು ಆಯ್ಕೆ ಮಾಡಿಕೊಳ್ಳಲಾಯಿತು.

3. ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಆಗಸ್ಟ್-29 ರಂದು ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನ ಕರಡು ಸಮಿತಿಯನ್ನು ರಚಿಸಲಾಯಿತು. ಅದರಂತೆ, ಸಮಿತಿಯು ಸಂವಿಧಾನ ಕರಡನ್ನು ಸಿದ್ಧಪಡಿಸಿ, ನವೆಂಬರ್ 04, 1947 ರಂದು ಸಂವಿಧಾನ ರಚನಾ ಸಭೆ ಮುಂದೆ ಮಂಡಿಸಿ, ಇದನ್ನು ಸುದೀರ್ಘ ಚರ್ಚೆ ನಂತರ ಅನೇಕ ತಿದ್ದುಪಡಿ/ ಪರಿಷ್ಕರಣೆ ನಂತರ ಸಂವಿಧಾನ ರಚನಾ ಸಮಿತಿಯು ನವೆಂಬರ್ 26, 1949ರಂದು ಸಂವಿಧಾನವನ್ನು ಅಂಗೀಕರಿಸಿತು. ಅದರಂತೆ, ಜನವರಿ 26, 1950ರಂದು ಸಂವಿಧಾನ ಜಾರಿಗೊಳಿಸಿದ್ದರಿಂದ ಈ ದಿನವನ್ನು ಗಣರಾಜ್ಯ ದಿನವನ್ನಾಗಿ ಆಚರಿಸುತ್ತಿದ್ದೇವೆ.

4. ನಮ್ಮ ಸಂವಿಧಾನವು ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು, ದೇಶದ ಭವಿಷ್ಯದ ಬಗ್ಗೆ ಸುಂದರ ಕನಸನ್ನು ಕಂಡು ಶಾಂತಿ ಜೀವನಕ್ಕಾಗಿ ಸುಸಂಬದ್ಧ ವ್ಯವಸ್ಥೆಯ ಸಮಗ್ರ ಚಿತ್ರಣವಾಗಿದೆ. ಇಲ್ಲಿ ಕಾನೂನುಗಳು, ವಿಧಿಗಳು ಸ್ಪಷ್ಟವಾಗಿದ್ದು ನಿಖರವಾಗಿವೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ವರವಾಗಿವೆ.

5. ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನ ನಡೆದ 100 ವರ್ಷದ ಸವಿ ನೆನಪಿಗಾಗಿ ನಮ್ಮ ಸರ್ಕಾರ ಗಾಂಧಿ ಭಾರತ್ ಹೆಸರಿನಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಮತ್ತು ಸಂವಿಧಾನದಲ್ಲಿ ಇದ್ದದ್ದು ಸಮಾಜದಲ್ಲಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಾಗ ಮಾತ್ರ, ಗಾಂಧೀಜಿಯವರು ಕಂಡ “ರಾಮ ರಾಜ್ಯ ಕನಸು ನನಸಾಗುತ್ತದೆ”.

6. ಜವಾಹರ್‌ ಲಾಲ್ ನೆಹರು ರವರು ಹೇಳಿದ ಹಾಗೆ “ಭಾರತ ಒಂದು ವೈವಿದ್ಯತೆಯಿಂದ ಕೂಡಿರುವ ಸಮೃದ್ಧ ದೇಶ” ಇಲ್ಲಿ ಹಲವು ಸಂಸ್ಕೃತಿ, ಧರ್ಮ, ಭಾಷೆ, ಪ್ರಾದೇಶಿಕತೆ ಇದ್ದರು ನಾವೆಲ್ಲ ಏಕತೆಯನ್ನು ಕಂಡಿದ್ದೇವೆ. ಭಾರತ ಸದೃಢವಾಗಿ ಬೆಳೆದಿದೆ. ಪ್ರಪಂಚದ ಭೂಪಟದಲ್ಲಿ ತನ್ನನ್ನು ತಾನು ಹೆಮ್ಮೆಯಿಂದ ಗುರುತಿಸಿಕೊಂಡಿದೆ. ಪ್ರಪಂಚದ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಂತು ಬೀಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು.

7. ಸಂವಿಧಾನದ ಆಶಯ, ಭದ್ರ ಬುನಾದಿಯ ಮೇಲೆ ನಮ್ಮ ನಾಡನ್ನು ಕಟ್ಟಿ ಬೆಳೆಸುವ ಕೆಲಸವನ್ನು ನಮ್ಮ ಸರ್ಕಾರ ಚಾಚು ತಪ್ಪದೇ ನಡೆಸುತ್ತಾ ಬಂದಿದೆ. ನಮ್ಮ ಸರ್ಕಾರ ಸುಭದ್ರವಾಗಿದ್ದು, ನಾಡಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ.

8. ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳು ಇವರುಗಳ ಸಾರಥ್ಯದಲ್ಲಿ, ನಮ್ಮ ಸರ್ಕಾರದ ‘ಪಂಚ ಗ್ಯಾರಂಟಿ’ ಗಳಾದ ಶಕ್ತಿಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಮೂಲಕ ನಮ್ಮ ರಾಜ್ಯ ಹಲವು ರಾಜ್ಯಗಳಿಗೆ ಮಾದರಿಯಾಗಿರುತ್ತದೆ.

9. ಅನ್ನಭಾಗ್ಯ ಯೋಜನೆ ಬಡ ಜನರಿಗೆ ಆಹಾರ ಭದ್ರತೆ:- ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ-2013 ರಡಿ ಕೇಂದ್ರ ಸರ್ಕಾರ ನೀಡುವ 5 ಕೆ.ಜಿ. ಜೊತೆಗೆ ರಾಜ್ಯ ಹೆಚ್ಚುವರಿಯಾಗಿ ಪ್ರತಿ ಫಲಾನುಭವಿಗೆ 5 ಕೆ.ಜಿ. ಅಕ್ಕಿ ಬದಲಿಗೆ ರೂ. 170/-ರಂತೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ DBT ಮಾಡಲಾಗುತ್ತಿದೆ.

10. ರಾಜ್ಯದಲ್ಲಿ ಅಕ್ಟೋಬರ್-2024ರ ಮಾಹೆಯಲ್ಲಿ 1,15,73,718 ಕಾರ್ಡ್ಗಳ 4,09,31,096 ಫಲಾನುಭವಿಗಳಿಗೆ ರೂ. 671.92 ಕೋಟಿ DBT ವರ್ಗಾವಣೆ ಪ್ರಗತಿಯಲ್ಲಿರುತ್ತದೆ. DBT ಪ್ರಾರಂಭವಾದ ಜುಲೈ-2023 ರಿಂದ ಅಕ್ಟೋಬರ್-2024ರವರೆಗೆ ರೂ. 10,447.43 ಕೋಟಿ DBT ಮೂಲಕ ಹಣ ವರ್ಗಾವಣೆ ಮಾಡಲಾಗಿದೆ.

 

11. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 14,189 ಅಂತ್ಯೋದಯ ಅನ್ನಯೋಜನೆಯ ಫಲಾನುಭವಿಗಳಿಗೆ 35 ಕೆ.ಜಿ. ಆಹಾರ ಧಾನ್ಯ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳಲ್ಲಿನ 2,16,745 ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ. ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಹಾಗೂ ಸೆಪ್ಟೆಂಬರ್-2024ರ ಮಾಹೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,09,677 ಅರ್ಹ ಕುಟುಂಬಗಳಿಗೆ ರೂ 12.25 ಕೋಟಿ ಹಣ DBT ಮೂಲಕ ವರ್ಗಾಯಿಸಲು ಕ್ರಮ ವಹಿಸಲಾಗಿದೆ.

12. ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಪ್ರತಿ ಮನೆ ಯಜಮಾನಿಗೆ ರೂ. 2000 ದಂತೆ ರಾಜ್ಯದಲ್ಲಿರುವ 1.22 ಕೋಟಿ ಫಲಾನುಭವಿಗಳಿಗೆ ಇಲ್ಲಿಯವರೆಗೆ ರೂ. 35,180 ಕೋಟಿ ಹಣವನ್ನು DBT ಮೂಲಕ ಕುಟುಂಬದ ಯಜಮಾನಿ ಖಾತೆಗೆ ವರ್ಗಾವಣೆ ಮಾಡಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಟ್ಟು 2,17,421 ಮಹಿಳಾ ಫಲಾನುಭವಿಗಳಿಗೆ ಆಗಸ್ಟ್-2023ರ ಮಾಹೆಯಿಂದ ಅಕ್ಟೋಬರ್-2024ರ ಮಾಹೆಯವರೆಗೆ 583.22 ಕೋಟಿ ರೂಗಳನ್ನು ಫಲಾನುಭವಿಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.

13. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲು ರಾಜ್ಯದ ಒಟ್ಟು 1.62 ಕೋಟಿ ಫಲಾನುಭವಿಗಳಿಗೆ ರೂ. 11,810 ಕೋಟಿಗಳನ್ನು ವ್ಯಯ ಮಾಡಲಾಗಿದೆ. ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ 4,42,087 ಫಲಾನುಭವಿಗಳಿಗೆ ಆಗಸ್ಟ್-2023 ರಿಂದ ಡಿಸೆಂಬರ್ 2024 ರವರೆಗೆ ಒಟ್ಟು ರೂ. 719 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.

14. ಶಕ್ತಿ ಯೋಜನೆಯು ಮಹಾತ್ಮ ಗಾಂಧೀಜಿ ಅವರ ಆಶಯದಂತೆ ನಮ್ಮ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈವರೆಗೆ 377 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯಡಿ ಸೌಲಭ್ಯವನ್ನು ಪಡೆದಿದ್ದು, ಈ ಉದ್ದೇಶಕ್ಕಾಗಿ ರೂ. 9124 ಕೋಟಿಗಳನ್ನು ಖರ್ಚು ಮಾಡಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ ರಾಜ್ಯ ರಸ್ತೆ ನಿಗಮದ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ 2023ರ ಜೂನ್ ಮಾಹೆಯಿಂದ 2025 ರ ಜನವರಿ 16 ರವರೆಗೆ 95,10,869 ಮಹಿಳೆಯರು ಪ್ರಯಾಣಿಸಿದ್ದು ರೂ. 28.75 ಕೋಟಿ ಹಾಗೂ ಬಿ.ಎಂ.ಟಿ.ಸಿ ದೇವನಹಳ್ಳಿ ವ್ಯಾಪ್ತಿಯಲ್ಲಿ ಇವರೆಗೂ 1,73,95,350 ಮಹಿಳೆಯರು ಪ್ರಯಾಣಿಸಿದ್ದು 29.71 ಕೋಟಿ ಖರ್ಚು ಮಾಡಲಾಗಿದೆ.

15. ಯುವನಿಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 2.14 ಲಕ್ಷ ವಿದ್ಯಾವಂತ ನಿರುದ್ಯೋಗ ಯುವಕ/ ಯುವತಿಯವರಿಗೆ ರೂ. 252.51 ಕೋಟಿ ರೂಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ 2580 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಕಳೆದ ಡಿಸೆಂಬರ್ ಅಂತ್ಯದವರೆಗೆ 2024 ಪದವೀಧರರು, 24 ಡಿಪ್ಲೋಮಾ ಅಭ್ಯರ್ಥಿಗಳು ಸೇರಿ ಒಟ್ಟು 2048 ಫಲಾನುಭವಿಗಳು ಯುವನಿಧಿ ಯೋಜನೆಯಡಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

16. ಅನ್ನ ಸುವಿಧಾ” ಯೋಜನೆ:- ರಾಜ್ಯದಲ್ಲಿ 90 ವರ್ಷ ಮೇಲ್ಪಟ್ಟ 7743 ಏಕ ಪಡಿತರ ಚೀಟಿದಾರರ “ಮನೆಗೆ ಪಡಿತರ ವಿತರಣೆ” ಮಾಡುವ “ಅನ್ನ ಸುವಿಧಾ” ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ.

17. ಕನಿಷ್ಟ ಬೆಂಬಲ ಬೆಲೆ ಯೋಜನೆ:- ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾಮಾನ್ಯ ಭತ್ತದ ದರ ರೂ. 2,300/- ಭತ್ತ ಗ್ರೇಡ್-ಎ ದರ ರೂ. 2,320/- ರಾಗಿ ರೂ. 4,290/- ಜೋಳ ಹೈ-ಬ್ರೀಡ್ ರೂ. 3,371/- ಜೋಳ ಮಾಲದಂಡಿ ರೂ. 3421/-ರಂತೆ ಖರೀದಿಸಲು ದಿನಾಂಕ: 01-12-2024 ರಂದು ನೋಂದಣಿ ಕಾರ್ಯ ಪ್ರಾರಂಭಿಸಲಾಗಿದೆ. 40,92,497 ರೈತರು ಈಗಾಗಲೇ ನೊಂದಣಿ ಮಾಡಿಕೊಂಡಿರುತ್ತಾರೆ ಹಾಗೂ 31-03-2025 ನೊಂದಣಿ ಕೊನೆಯ ದಿನಾಂಕವಾಗಿರುತ್ತದೆ. ರೈತ ಭಾಂದವರು ಈ ಯೋಜನೆ ಸದುಪಯೋಗಪಡಿಸಿಕೊಳ್ಳುವುದು.

18. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಇಲ್ಲಿಯವರೆಗೆ 21,260 ರೈತರು ನೊಂದಣಿ ಪಡೆದಿದ್ದು, ಅಂದಾಜು 3,05,116 ಕ್ವಿಂಟಾಲ್ ರಾಗಿ ಖರೀದಿಗೆ ನೊಂದಣಿಯಾಗಿದೆ ಮತ್ತು ನೊಂದಣಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

 

19. “ನಮ್ಮ ಶಾಲೆ-ನಮ್ಮ ಜವಾಬ್ದಾರಿ” (C.S.R):- ಜಿಲ್ಲೆಯ 04 ತಾಲ್ಲೂಕುಗಳಲ್ಲಿ ಸ್ಥಾಪಿತವಾಗಿರುವ ಕೈಗಾರಿಕೆಗಳು, ಎನ್.ಜಿ.ಒ. ಹಾಗೂ ಇತರೆ ಸಂಸ್ಥೆಗಳು ತಮ್ಮ ಸಿ.ಎಸ್.ಆರ್. ಅನುದಾನ ಮುಖಾಂತರ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಎಂಬ ಸರ್ಕಾರದ ಮಹತ್ವದ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಮಕ್ಕಳಿಗೆ ಶೈಕ್ಷಣಿಕ ಗುಣಮಟ್ಟ ಹಾಗೂ ಸರ್ವಾಂಗೀಣ ಬೆಳವಣಿಗೆಗಾಗಿ ಹೊಸ ಕೊಠಡಿಗಳ ನಿರ್ಮಾಣ, ಕೊಠಡಿಗಳ ದುರಸ್ತಿ, ಸಭಾಂಗಣ, ಪಾಠೋಪಕರಣ, ಪೀಠೋಪಕರಣಗಳ ಬಲವರ್ಧನೆಗೆ ಸಹಕಾರವನ್ನು ಪಡೆಯಲಾಗುತ್ತಿದೆ.

 

20. ಸಿ.ಎಸ್.ಆರ್. ಅನುದಾನದ ಮೂಲಕ 2023-24ನೇ ಸಾಲಿನಲ್ಲಿ ಜಿಲ್ಲೆಯ 24 ಶಾಲೆಗಳಿಗೆ 20 ಕಂಪನಿಗಳು ಕೈ ಜೋಡಿಸಿ ಸುಮಾರು 8.20 ಕೋಟಿ ಮೌಲ್ಯದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುತ್ತಾರೆ. 2024-25ನೇ ಸಾಲಿನಲ್ಲಿ ಜಿಲ್ಲೆಯ 10 ಶಾಲೆಗಳಿಗೆ 06 ಪ್ರತಿಷ್ಟಿತ ಕಂಪನಿಗಳು ಸುಮಾರು 12.25 ಕೋಟಿ ಮೌಲ್ಯದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದೆ ಬಂದಿರುತ್ತಾರೆ.

 

21. ಇನ್ಪೋಸೀಸ್ ಸಂಸ್ಥೆಯು ಜಿಲ್ಲೆಯ 102 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಶಾಲಾ ಸಮೀಕ್ಷೆಯೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳು, ಡಿಜಿಟಲ್ ಉಪಕರಣಗಳು, ಶಿಕ್ಷಕರು ಹಾಗೂ ವಿಷಯವಾರು ಲ್ಯಾಬ್ ಸ್ಥಾಪನೆಗೆ ಕ್ರಿಯಾಯೋಜನೆ ಮತ್ತು ಅಂದಾಜು ಪಟ್ಟಿ ಸಿದ್ದಪಡಿಸಿದ್ದಾರೆ. ಪ್ರಾರಂಭಿಕವಾಗಿ ಇನ್ಪೋಸಿಸ್ ಸಂಸ್ಥೆಯ ವತಿಯಿಂದ ಪ್ರಸ್ತುತ ದೇವನಹಳ್ಳಿ ತಾಲ್ಲೂಕಿನ 33 ಶಾಲೆಗಳ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು ಹೊಸಕೋಟೆ ತಾಲ್ಲೂಕಿನ 29 ಸರ್ಕಾರಿ ಶಾಲೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.

 

22. ಸರಳೀಕೃತ ದರಖಾಸ್ತು ಪೋಡಿ ಆಂದೋಲನಕ್ಕೆ ದಿನಾಂಕ: 24-01-2025ರಂದು ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡರವರ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1236 ಆರ್ಟಿಸಿ ವಿತರಣೆ ಮಾಡುವ ಮೂಲಕ ರಾಜ್ಯಮಟ್ಟದ ಹೊಸ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ರೈತಾಪಿ ಜನರು ಪೋಡಿಗಾಗಿ ಕಂದಾಯ ಇಲಾಖೆಯ ಕಛೇರಿಗಳನ್ನು ಅಲೆಯುವುದನ್ನು ತಪ್ಪಿಸಲು ಬಹಳ ವ್ಯವಸ್ಥಿತವಾದ ಪೋಡಿ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಕ್ರೀಯಾಶೀಲ ಸಚಿವರಾದ ಕೃಷ್ಣ ಭೈರೇಗೌಡರಿಗೆ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

23. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1942ನೇ ಇಸವಿಯಿಂದ ಇತ್ತಿಚೀನವರೆಗೆ ದರಖಾಸ್ತು ಹಾಗೂ ಬಗರ್ಹುಕ್ಕುಂ ಸಾಗುವಳಿ ಅನ್ವಯ ಜಮೀನು ಮಂಜೂರಾತಿಯಾಗಿ ನಾನಾ ಕಾರಣಗಳಿಂದ ಪೋಡಿ ದುರಸ್ಥಿಯಾಗದೆ, ಸುಮಾರು 50,500 ರೈತರ ಜಮೀನುಗಳು ಪ್ರತ್ಯೇಕ ಸರ್ವೇ ನಂಬರ್ಗಳಾದೇ ಬಾಕಿ ಇರುತ್ತವೆ. ಈ ಪೈಕಿ ಸರಳೀಕೃತ ದರಖಾಸ್ತು ಪೋಡಿ ಆಂದೋಲನದಲ್ಲಿ ಒಟ್ಟು 73 ಗ್ರಾಮಗಳ 90 ಸರ್ವೇ ನಂಬರ್ಗಳಲ್ಲಿ 1236 ರೈತರಿಗೆ ಪೋಡಿ ಮಾಡಿ, 1235 ಎಕರೆ 5 ಗುಂಟೆ ಜಮೀನುಗಳನ್ನು ಅಳತೆ ಮಾಡಿ, ಟಿಪ್ಪಣಿ, ಆಕಾರಬಂದು ಮತ್ತು ಪಹಣಿಗಳನ್ನು ಸೃಜಿಸಲಾಗಿದೆ.

 

24. ಎತ್ತಿನಹೊಳೆ ಯೋಜನೆಗೆ ಸೆಪ್ಟೆಂಬರ್-6ರಂದು ಸನ್ಮಾನ್ಯ ಮುಖ್ಯಮಂತ್ರಿಗಳು, ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಚಾಲನೆ ನೀಡಿರುತ್ತಾರೆ. ಎತ್ತಿನಹೊಳೆ ಹೋರಾಟವು ಒಂದು ಹಂತಕ್ಕೆ ಬಂದಿರುವುದು ಸಂತಸವಾಗಿದೆ. ಬಯಲುಸೀಮೆ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಅನುಕೂಲವಾಗಲಿದೆ. ಈ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ 1924 ಟಿಎಂಸಿ ಹಾಗೂ ಅಂತರ್ಜಲ ಮರುಪೂರ್ಣಗೊಳಿಸುವ ಸಲುವಾಗಿ 46 ಸಣ್ಣ ನೀರಾವರಿ ಕೆರೆಗಳಿಗೆ 2901 ಟಿಎಂಸಿ ನೀರು ತುಂಬಿಸಲು ಉದ್ದೇಶಿಸಲಾಗಿದೆ.

 

25. ವೃಷಭಾವತಿ ಯೋಜನೆ ಮತ್ತು ಹೆಚ್.ಎನ್. ವ್ಯಾಲಿ ಯೋಜನೆಯಡಿ 243 MLD ಸಂಸ್ಕರಿಸಿದ ನೀರನ್ನು ರೂ. 1081 ಕೋಟಿ ಅನುದಾನದಲ್ಲಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುತ್ತಿದೆ.

 

26. ಕೆಸಿ ವ್ಯಾಲಿ ಯೋಜನೆ ಮೂಲಕ ಹೊಸಕೋಟೆಯ 38 ಕೆರೆಗಳಿಗೆ ರೂ 135 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಅಂರ್ತಜಲಮಟ್ಟ ಹೆಚ್ಚಿ ತೋಟಗಾರಿಕೆ, ರೇಷ್ಮೆ ಮತ್ತು ಹೈನುಗಾರಿಕೆಗೆ ಹೆಚ್ಚಿನ ಪ್ರಯೋಜನ ನಿರೀಕ್ಷಿಸಲಾಗಿದೆ.

 

27. ಸಣ್ಣ ನೀರಾವರಿ ಇಲಾಖೆಯಡಿ 9 ಕೆರೆಗಳಿದ್ದು, ಅದರಲ್ಲಿ ಆಲೂರುದುದ್ದನಹಳ್ಳಿ ಕೆರೆಯ ಸಮಗ್ರ ಅಭಿವೃದ್ಧಿಗಾಗಿ 4 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಂಡಿರುತ್ತದೆ ಮತ್ತು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಚೆಕ್ಡ್ಯಾಂಗಳ ನಿರ್ಮಾಣಕ್ಕಾಗಿ ರೂ. 2.30 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 8 ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

 

28. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 611 ಜಿಲ್ಲಾ ಪಂಚಾಯಿತಿ ಕೆರೆಗಳಿದ್ದು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 101 ಕೆರೆಗಳ ಪೈಕಿ ಪ್ರಥಮ ಹಂತದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ 12 ಕೆರೆಗಳ ಸಮಗ್ರ ಅಭಿವೃದ್ಧಿಗೆ ರೂ. 50 ಕೋಟಿಗಳಲ್ಲಿ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಉಳಿದ ಕೆರೆಗಳನ್ನು ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು.

 

29. ಕೃಷಿ ಯಾಂತ್ರೀಕರಣ ಉಪ ಅಭಿಯಾನ ಉಪಯೋಜನೆಯಡಿ 151.45 ಲಕ್ಷ ಹಾಗೂ ಕೃಷಿ ಯಾಂತ್ರೀಕರಣ ಯೋಜನೆಯಡಿ 141.83 ಲಕ್ಷ ರೂ.ಗಳ ಕ್ರಿಯಾಯೋಜನೆ ನೀಡಲಾಗಿದ್ದು, ಈವರೆಗೆ ಕ್ರಮವಾಗಿ 113.5 ಮತ್ತು 73.25 ಲಕ್ಷ ರೂಗಳ ಸಹಾಯಧನದಲ್ಲಿ ವಿವಿಧ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಲಾಗಿದೆ.

 

30. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಭದ್ರತೆ ಒದಗಿಸುವ ಉದ್ದೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 4885 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿರುತ್ತಾರೆ.

 

31. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಒಟ್ಟು 252 ಫಲಾನುಭವಿಗಳಿಗೆ 92.74 ಲಕ್ಷ ರೂ. ಗಳನ್ನು ವಿವಿಧ ಘಟಕಗಳಿಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಸಹಾಯಧನ ಪಾವತಿಸಲಾಗಿದೆ.

 

32. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಒಟ್ಟು 755 ಫಲಾನುಭವಿಗಳಿಗೆ 174.56 ಲಕ್ಷ ರೂ ಗಳ ಸಹಾಯಧನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.

 

33. 1927 ರೇಷ್ಮೆ ಬೆಳೆಗಾರರಿಗೆ ದ್ವಿತಳಿ ರೇಷ್ಮೆಗೂಡು ಪ್ರೋತ್ಸಾಹಧನವಾಗಿ 34.14 ಲಕ್ಷ ರೂ. ಗಳನ್ನು ನೀಡಲಾಗಿದೆ. 14 ಜನ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಹುಳು ಸಾಕಾಣಿಕಾ ಮನೆಗಳನ್ನು ನಿರ್ಮಾಣ ಮಾಡಿರುವುದಕ್ಕಾಗಿ 44.14 ಲಕ್ಷ ರೂ.ಗಳನ್ನು ಸಹಾಯಧನವನ್ನಾಗಿ ನೀಡಲಾಗಿದೆ.

 

34. 48 ರೇಷ್ಮೆ ಬೆಳೆಗಾರರಿಗೆ 30.10 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಘಟಕ ಅಳವಡಿಸಿದಕ್ಕೆ 31.26 ಲಕ್ಷ ರೂ.ಗಳನ್ನು ಸಹಾಯಧನವನ್ನಾಗಿ ನೀಡಲಾಗಿದೆ.

 

35. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ:- ಮೇವಿನ ಕೊರತೆಯಾಗದಂತೆ ಹಸಿರು ಮೇವಿನ ಉತ್ಪಾದನೆಗಾಗಿ 5 ಕೆ.ಜಿ ಯ 9514 ಜೋಳದ ಮಿನಿಕಿಟ್ ಹಾಗೂ 4629 ಮೆಕ್ಕೆಜೋಳದ ಮಿನಿಕಿಟ್ ಗಳನ್ನು ಜಿಲ್ಲೆಯ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ.

 

36. ಅನುಗ್ರಹ ಯೋಜನೆಯಡಿ ವಿಮೆ ಇಲ್ಲದ ಜಾನುವಾರುಗಳ ಆಕಸ್ಮಿಕ ಮರಣ ಹೊಂದಿದ ರಾಸುಗಳಿಗೆ ಈವರೆಗೂ 17.30 ಲಕ್ಷ ರೂ.ಗಳ ಪರಿಹಾರವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.

 

37. ವಸತಿ ಯೋಜನೆ (ಗ್ರಾಮೀಣ):- 2022-23ನೇ ಸಾಲಿನವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿವಿಧ ವಸತಿ ಯೋಜನೆಗಳ ಅನುಷ್ಟಾನಕ್ಕಾಗಿ ಒಟ್ಟು 42925 ಮನೆಗಳು ಮಂಜೂರಾಗಿದ್ದು, 2025ರ ಜನವರಿ 10 ರವರೆಗೆ 37914 ಮನೆಗಳನ್ನು ಪೂರ್ಣಗೊಳಿಸಿ ಶೇ.88 ರಷ್ಟು ಪ್ರಗತಿ ಸಾಧಿಸಲಾಗಿದೆ.

 

38. 2021-22 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಗೆ ಒಟ್ಟು 697 ಮನೆ ಮಂಜೂರಾತಿ ನೀಡಲಾಗಿರುತ್ತದೆ. ಇದರಲ್ಲಿ 2025ರ ಜನವರಿ 10 ರವರೆಗೆ 257 ಮನೆಗಳು ಪೂರ್ಣಗೊಂಡಿರುತ್ತವೆ, 189 ಮನೆಗಳು ವಿವಿಧ ಹಂತದಲ್ಲಿರುತ್ತವೆ ಹಾಗೂ ಉಳಿದ ಮನೆಗಳನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದೆ.

 

39. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ:- ಬಂಡವಾಳ ಹೂಡಿಕೆ ಮಾಡುವ ಕೈಗಾರಿಕಾ ಘಟಕಗಳಿಗೆ ಸ್ಥಿರ ಬಂಡವಾಳ ಹೂಡಿಕೆಯಲ್ಲಿ ಶೇ 10 ರಷ್ಟು ಗರಿಷ್ಠ 25 ಲಕ್ಷ ರೂ. ಸಹಾಯಧನ ನೀಡುವ ಸೌಲಭ್ಯದಡಿ 2020-25ರ ಕೈಗಾರಿಕಾ ನೀತಿಯಡಿ ಒಂದು ಘಟಕಕ್ಕೆ 25.00 ಲಕ್ಷ ರೂ. ಸಹಾಯಧನ ಮಂಜೂರಾಗಿ 10 ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ.

 

40. ವಿಶ್ವಕರ್ಮ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿ ಮಟ್ಟದಲ್ಲಿ 40331 ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ 32730 ಅರ್ಜಿಗಳನ್ನು 2ನೇ ಹಂತಕ್ಕೆ (ಜಿಲ್ಲಾಮಟ್ಟಕ್ಕೆ) ಶಿಫಾರಸ್ಸು ಮಾಡಲಾಗಿದ್ದು ಮುಂದಿನ ಹಂತದಲ್ಲಿ ತರಬೇತಿ ನೀಡಲಾಗುವುದು.

 

41. ನರೇಗಾ:- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 14 ಲಕ್ಷ ಮಾನವ ದಿನಗಳ ಗುರಿ ಹೊಂದಿದ್ದು, ಇಲ್ಲಿಯವರೆಗೆ 13.77 ಲಕ್ಷಗಳ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಜನವರಿ ಮಾಹೆಯ ಸಂಚಿತ ಗುರಿಗೆ ಶೇಕಡ 105.35% ರಷ್ಟು ಪ್ರಗತಿ ಸಾಧಿಸಲಾಗಿದೆ.

 

42. ಮಕ್ಕಳ ಸ್ನೇಹಿ ಕುರಿತು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರ ಮಕ್ಕಳ ಲಾಲನೆ ಪಾಲನೆಗಾಗಿ ಒಟ್ಟು 79 ಕೂಸಿನ ಮನೆ ಪ್ರಾರಂಭಿಸಿದ್ದು, 1194 ಮಕ್ಕಳು ನೋಂದಣಿಯಾಗಿದ್ದು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ.

 

43. ಸಂಜೀವಿನಿ-ಡೇ-N.R.L.M:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4947 ಸ್ವ-ಸಹಾಯ ಗುಂಪುಗಳಿಗೆ 58,869 ಕುಟುಂಬಗಳನ್ನು ಒಕ್ಕೂಟದ ವ್ಯಾಪ್ತಿಗೆ ತರಲಾಗಿರುತ್ತದೆ. ಈ ಒಕ್ಕೂಟಗಳಡಿ ಜಿಲ್ಲೆಯ 101 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಗೆ 25.08 ಕೋಟಿ ರೂ.ಗಳ ಸಮುದಾಯ ಬಂಡವಾಳ ನಿಧಿ ಅನುದಾನ ಬಿಡುಗಡೆಯಾಗಿರುತ್ತದೆ. ಈ ಅನುದಾನವನ್ನು ಸಾಲವಾಗಿ 2437 ಸ್ವ-ಸಹಾಯ ಗುಂಪುಗಳಿಗೆ ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ಬಿಡುಗಡೆ ಮಾಡಲಾಗಿದೆ.

 

44. ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟಕುವ ದರದಲ್ಲಿ ಒದಗಿಸಲು ಸ್ವ-ಸಹಾಯ ಗುಂಪಿನ ಮಹಿಳೆಯರೇ ನಡೆಸಲು ಅಕ್ಕ ಕೆಫೆ ಅನ್ನು ದೇವನಹಳ್ಳಿ ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯಿತಿ ಮುಂಭಾಗ ಆರಂಭಿಸಲಾಗಿದೆ.

 

45. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:- ಜಿಲ್ಲೆಯಲ್ಲಿ ಇದುವರೆಗೂ 3.98 ಲಕ್ಷ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ರಾಜ್ಯದಲ್ಲಿ ಕಾರ್ಡ್ ಗಳನ್ನು ವಿತರಿಸುವಲ್ಲಿ ಜಿಲ್ಲೆಯು ಮೊದಲನೇ ಸ್ಥಾನದಲ್ಲಿದೆ.

 

46. ಬಿ.ಪಿ.ಎಲ್ ಕಾರ್ಡ್ ದಾರರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಹ 5 ಲಕ್ಷ ರೂ.ಗಳವರೆಗೆ ಚಿಕಿತ್ಸೆ ಮತ್ತು ಎ.ಪಿ.ಎಲ್ ಕಾರ್ಡ್ ದಾರರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂ. ಗಳವರೆಗೆ ಚಿಕಿತ್ಸೆ ಪಡೆಯಬಹುದಾಗಿರುತ್ತದೆ.

 

47. ಸಮಾಜ ಕಲ್ಯಾಣ ಇಲಾಖೆ:- 2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ 570 ವಿದ್ಯಾರ್ಥಿಗಳಿಗೆ ಒಟ್ಟು 119.20 ಲಕ್ಷ ರೂ.ಗಳ Prize Money ನೀಡುವ ಮೂಲಕ ಇನ್ನು ಹೆಚ್ಚಿನಮಟ್ಟದ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗಿದೆ.

 

48. ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆ ಮೂಲಕ ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗೇಟ್, ಅಣಿಘಟ್ಟ ಗೇಟ್ ರಾಷ್ಟ್ರೀಯ ಹೆದ್ದಾರಿ-207ರಲ್ಲಿ ರಸ್ತೆ ಅಭಿವೃದ್ಧಿಗಾಗಿ ರೂ. 7.42 ಕೋಟಿ ವೆಚ್ಚ ಮಾಡಲಾಗಿದೆ ಮತ್ತು ನಂದಿ ಗ್ರಾಮದಿಂದ ವಿಜಯಪುರ, ಶಿಡ್ಲಘಟ್ಟ, ದಿಬ್ಬೂರಹಳ್ಳಿ, ಇ-ತಿಮ್ಮಸಂದ್ರ, ಪಾಲಿಕೆರೆ ರಸ್ತೆ ಅಭಿವೃದ್ಧಿ ರೂ.15.18 ಕೋಟಿ ವ್ಯಯ ಮಾಡಲಾಗಿದೆ.

 

49. ನಾಗವಾರ, ಥಣಿಸಂದ್ರ, ಕಣ್ಣೂರು, ಬಾಗಲೂರು, ಅರಿಶಿಣಕುಂಟೆ, ದೇವನಹಳ್ಳಿ, ಕಾರಹಳ್ಳಿ ರಸ್ತೆಯ ಸಮಗ್ರ ಅಭಿವೃದ್ಧಿ ರೂ. 25.00 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಒಟ್ಟಾರೆ 2023-24ನೇ ಸಾಲಿನಲ್ಲಿ ದೇವನಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ರೂ. 114.21 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.

 

50. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ (SHDP) ರೂ. 50.50 ಕೋಟಿ ಅನುದಾನದಲ್ಲಿ 15.25 ಕಿ.ಮೀ. ಉದ್ದದ ದೇವನಹಳ್ಳಿ-ವಿಜಯಪುರ ಮುಖ್ಯರಸ್ತೆ ನಿರ್ಮಾಣ ಪೂರ್ಣಗೊಂಡಿರುತ್ತದೆ.

 

51. ವಿಜಯಪುರ ಪಟ್ಟಣ ಪರಿಮಿತಿಯಲ್ಲಿ 4 ಪಥದ ಕಾಂಕ್ರೀಟ್ ರಸ್ತೆ ಪ್ರಗತಿಯಲ್ಲಿದ್ದು, ದೇವನಹಳ್ಳಿ ಪಟ್ಟಣ ಪರಿಮಿತಿಯಲ್ಲಿ 4 ಪಥದ ಕಾಂಕ್ರೀಟ್ ರಸ್ತೆ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ.

 

52. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ಪ್ರಸ್ತುತ ಇರುವ ಹೆಚ್.ಟಿ. ಮತ್ತು ಎಲ್.ಟಿ. ಮೇಲ್ತಂತಿ ವಿದ್ಯುತ್ ಮಾರ್ಗಗಳನ್ನು ಹೆಚ್.ಟಿ. ಮತ್ತು ಎಲ್.ಟಿ. Under Ground Cable ಆಗಿ ಬದಲಾಯಿಸುವ ಕಾಮಗಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೂ. 365.00 ಕೋಟಿ ಮತ್ತು ದೇವನಹಳ್ಳಿ ಉಪವಿಭಾಗದ ದೇವನಹಳ್ಳಿ ನಗರದಲ್ಲಿ ರೂ. 39.00 ಕೋಟಿ ಅನುದಾನ ಒದಗಿಸಲಾಗಿದೆ.

 

53. “ಜಲ ಜೀವನ್ ಮಿಷನ್”:- ಜಿಲ್ಲೆಯಲ್ಲಿ 2.08 ಲಕ್ಷ ಕುಟುಂಬಗಳಿಗೆ ಕುಡಿಯುವ ನೀರಿನ ನಳ ಸಂರ್ಪಕ ಕಲ್ಪಿಸುವ ಯೋಜನೆ ಇದಾಗಿದೆ. 968.15 ಕೋಟಿ ವೆಚ್ಚದಲ್ಲಿ 1192 ಜನವಸತಿಗಳಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, ಈಗಾಗಲೇ 439.50 ಕೋಟಿ ವೆಚ್ಚದಲ್ಲಿ 540 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ಮಾರ್ಚ್ 2026 ರ ಅಂತ್ಯದ ಒಳಗಾಗಿ ಎಲ್ಲಾ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ನೀರು ಸಂಪರ್ಕ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.

 

54. ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ: ಕೇಂದ್ರ ಸರ್ಕಾರದ ಅಲಿಮ್ಕೊ ಸಂಸ್ಥೆಯ ವತಿಯಿಂದ ವಯೋಶ್ರೀ ಮತ್ತು ಅಡಿಪ್ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 235 ವಿಕಚೇತನರಿಗೆ ಹಾಗೂ 182 ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣೆ ಮಾಡಲಾಗಿದೆ.

 

55. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿ ದೃಷ್ಠಿಯ ಹಿನ್ನೆಲೆಯಲ್ಲಿ ನಮ್ಮ ಶಾಲೆ-ನಮ್ಮ ಜವಬ್ದಾರಿ ಯೋಜನೆ, ಕೆರೆಗಳ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿ ಮತ್ತು ರಸ್ತೆ ಸಂಪರ್ಕ, ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು, ಸಾರ್ವಜನಿಕರಿಗೆ ರಸ್ತೆ, ಕುಡಿಯುವ ನೀರಿಗೆ ಆದ್ಯತೆ ನೀಡುವುದು, ಬೃಹತ್ ಉದ್ಯೋಗ ಮೇಳದ ಆಯೋಜನೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜಿಲ್ಲೆಯ ಜನರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯ ಇಲಾಖೆಗಳು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿವೆ.

56. ನಮ್ಮ ಸರ್ಕಾರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ನಂಬಿಕೆಯಿರಿಸಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕಿನಲ್ಲಿ ಭದ್ರತೆಯ ಭಾವ ಕಾಣಬೇಕು ಎಂದು ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ನಮ್ಮ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ.

57. ಸಂವಿಧಾನ ಕರ್ತೃ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಸಂವಿಧಾನ ಕೇವಲ ವಕೀಲರ ದಾಖಲೆಯಲ್ಲ, ಇದೊಂದು ಜೀವನ ಸಾಧನ, ಇದರ ಅಂತಃಸತ್ವ ಅಸೀಮವಾದದ್ದು” ಎಂದು ಹೇಳಿದ್ದಾರೆ.

ಸಮಾಜದ ಶ್ರೇಯೋಭಿವೃದ್ಧಿಯೇ ನಮ್ಮ ಸಂವಿಧಾನದ ಅಂತಿಮ ಆಶಯವೆಂದು ಅರಿತು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿದ್ದೇವೆ. ಆ ಮೂಲಕ ಭಾರತವನ್ನು ಸಶಕ್ತ, ಸದೃಢ ಪ್ರಜಾಪ್ರಭುತ್ವವಾಗಿ ರೂಪಿಸಲು ಶ್ರಮಿಸೋಣ.

58. ಕುವೆಂಪು ಅವರು ತಮ್ಮ ವಿಶ್ವಮಾನವ ಸಂದೇಶದಲ್ಲಿ ಹೇಳಿದಂತೆ ʼವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು’ ಎಂಬುದನ್ನು ಅರ್ಥೈಸಿಕೊಂಡು, ಮೇಲು, ಕೀಳು, ಬಡವ, ಬಲ್ಲಿದನೆಂಬ ಭೇದ ಮರೆತು ರಾಷ್ಟ್ರ ನಿರ್ಮಾಣ ಮಾಡೋಣ.

ಸ್ನೇಹ, ಪ್ರೀತಿ, ಸೋದರ ಭಾವದ ಸೆಲೆ ನಮ್ಮ ಜೀವಾಳವಾಗಲಿ ಎಂದು ಹಾರೈಸಿ ನನ್ನ ಮಾತು ಮುಗಿಸುತ್ತೇನೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!