ಬೆಂಗಳೂರು : ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ‘ಜಿಂದಾಲ್ ಸಂಸ್ಥೆಯವರು ಕ್ರಮೇಣವಾಗಿ ಕೆರೆಯ ಜಾಗವನ್ನು ಒತ್ತುವರಿ ಮಾಡುವ ಮೂಲಕ ಸರ್ಕಾರಿ ಜಮೀನನ್ನು ಕಬಳಿಸುವ ಹುನ್ನಾರ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇಂದು ಕೆರೆಯಲ್ಲಿ ಜೆಸಿಬಿ ಹಾಗೂ ಹಿಟ್ಯಾಚಿಗಳಿಂದ ಕೆರೆಯಲ್ಲಿ ಕೆಲಸ ಮಾಡುತ್ತಿದ್ದು ನಾವು ಜಾಗಕ್ಕೆ ಬಂದ ತಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದಾರೆ’, ಕೆರೆ ರಾಮಣ್ಣ(ರಾಮಕೃಷ್ಣಯ್ಯ) ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಮುಖ್ಯರಸ್ತೆಯ ನೈಸ್ ರಸ್ತೆ ಸಮೀಪದಲ್ಲಿರುವ ಮಾದಾವರ ಕೋಡಿಪಾಳ್ಯ ಕೆರೆಯನ್ನು ಜಿಂದಾಲ್ ಸಂಸ್ಥೆಯವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆರೆಯನ್ನು ಕಣ್ಣ ಮುಂದೆಯೇ ಕಬಳಿಸುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸರ್ಕಾರದ ಜಾಗವನ್ನು ಉಳಿಸಬೇಕಾದವರೇ ಅವರ ಜೊತೆ ಶಾಮೀಲಾಗಿ ಏನೂ ಕಾಣದವರಂತೆ ಸುಮ್ಮನಿದ್ದಾರೆ.
ಶಾಸಕರ ಗಮನಕ್ಕೆ ತಂದರೂ ಏನೂ ಪ್ರಯೋಜನವಿಲ್ಲ. ಅದೇ ಜಾಗದಲ್ಲಿ ಬಡವರ ಮನೆ ಇದ್ದರೆ ಅಧಿಕಾರಿಗಳ ಸಮೇತ ಬಂದು ಬಡವರ ಮುಂದೆ ತಮ್ಮ ಅಧಿಕಾರ ದರ್ಪ ಚಲಾಯಿಸುತ್ತಿದ್ದರು. ಆದರೆ ಪ್ರಭಾವಿಗಳಿಗೊಂದು ನ್ಯಾಯ ಬಡವರಿಗೊಂದು ನ್ಯಾಯ ಎಂಬಂತಾಗಿದೆ ನಮ್ಮ ಸರ್ಕಾರದ ವ್ಯವಸ್ಥೆ’, ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಲೋಕಾಯುಕ್ತ ಸೇರಿದಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ರಾಜ್ಯಪಾಲರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಯಾವ ಉದ್ದೇಶಕ್ಕೆ ಎಂಬುದು ತಿಳಿಯುತ್ತಿಲ್ಲ. ಪೊಲೀಸರು ಕೂಡಾ ಅವರ ಕೈಗೊಂಬೆಯಾಗಿ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.
ಸತತವಾಗಿ 14 ವರ್ಷಗಳಿಂದ ಕೆರೆ ಉಳಿಸಲು ಹೋರಾಡುತ್ತಿದ್ದರೂ ಪದೇ ಪದೇ ಒತ್ತುವರಿ ಮಾಡುತ್ತಾ ಬಂದಿದ್ದಾರೆ. ನ್ಯಾಯ ಕೊಡಿಸಬೇಕಾದ ಮಾದನಾಯಕನಹಳ್ಳಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಮುರಳಿ ನನ್ನನ್ನು ಬೆದರಿಸಿ ನನ್ನನ್ನು ಜೈಲಿಗೆ ಹಾಕ್ತೀನಿ ಅಂತಾ ಅವಾಜ್ ಹಾಕ್ತಾರೆ. ನನ್ನ ಪ್ರಾಣ ಹೋದರೂ ಸರಿ ಕೆರೆಯ ಜಾಗವನ್ನು ಮರಳಿ ಪಡೆಯುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ದೂರು ನೀಡುತ್ತೇನೆ’, ಎಂದು ತಿಳಿಸಿದರು.
ಜಿಂದಾಲ್ ಸಂಸ್ಥೆಯವರು ಸಮಾಜ ಸೇವೆ ಮಾಡುತ್ತಿದ್ದೇನೆ ಅಂತಾ ಹೇಳಿಕೊಂಡು ಸಾರ್ವಜನಿಕರ ಸ್ವತ್ತಾದ ಕೆರೆಯ ಜಾಗವನ್ನು ಹೊಡೆಯುವ ಉದ್ದೇಶವೇನು. ಸರ್ಕಾರ ಈ ಕೂಡಲೇ ಕೆರೆ ಒತ್ತುವರಿಯನ್ನು ನಿಲ್ಲಿಸುವುದರ ಜೊತೆಗೆ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಮರಳಿ ನೀಡಬೇಕು’, ಎಂದು ಒತ್ತಾಯಿಸಿದರು.
ವರದಿ : ಅಯ್ಯಣ್ಣ ಮಾಸ್ಟರ್