ಬೆಳಗಾವಿ : ಬಿಜೆಪಿಯ ರೆಬಲ್ ನಾಯಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯ ಬಗ್ಗೆ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದು, ಹೈಕಮಾಂಡ್ ಜೊತೆ ಮಾತಾಡಿ ಯತ್ನಾಳ್ ಅವರನ್ನು ವಾಪಸ್ ಪಕ್ಷಕ್ಕೆ ಬರುವಂತೆ ಮಾಡುತ್ತೇವೆ ಎಂದರು.
ಈ ಬಗ್ಗೆ ಮಾತನಾಡಿದ ಅವರು, ಯತ್ನಾಳ್ ಲಿಂಗಾಯತ ಸಮುದಾಯದ ದೊಡ್ಡ ನಾಯಕ, ಪಕ್ಷಕ್ಕಾಗಿ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ನಾಳೆ ಪಕ್ಷದ ನಾಯಕರ ಜೊತೆ ಮಾತನಾಡಿ ಯತ್ನಾಳ್ ಅವರಿಗೆ ಪತ್ರ ಬರೆಸಿ ಉಚ್ಚಾಟನೆ ಹಿಂಪಡೆಯುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಪಕ್ಷದಲ್ಲಿ ಇಂತಹ ಘಟನೆ ನಡೆಯಬಾರದಿತ್ತು, ಇದರಿಂದ ವೈಯಕ್ತಿಕವಾಗಿ ತುಂಬಾ ನೋವಾಗಿದೆ. ಕಾರ್ಯಕರ್ತರಿಗೂ ಕೂಡ ಸಾಕಷ್ಟು ನೋವಾಗಿದೆ. ಪಕ್ಷದ ಹಿತಾಸಕ್ತಿಯಿಂದ ಅವರನ್ನು ಪಕ್ಷಕ್ಕೆ ಸೇರಿಸುವ ಕೆಲಸ ಬಿಜೆಪಿ ಮಾಡುತ್ತೆ, ಎಲ್ಲಾ ಘಟನೆಗಳನ್ನು ಮರೆತು ಮುನ್ನಡೆಯೋಣ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಪಕ್ಷದಿಂದ ಉಚ್ಚಾಟನೆಯಿಂದಾಗಿ ಯತ್ನಾಳ್ ಕೂಡ ಸಾಕಷ್ಟು ನೋವನುಭವಿಸುತ್ತಿದ್ದಾರೆ. ಈ ಬಗ್ಗೆ ಯತ್ನಾಳ್ ಬಳಿ ಮಾತನಾಡಿ ನನಗೆ ತಿಳಿ ಹೇಳಿ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಕೆಲಸ ಮಾಡುತ್ತೇವೆ. ಯಾರೇ ಆಗಲಿ ಬಿಜೆಪಿ ಬಿಟ್ಟು ಹೋಗುವ ಮಾತೇ ಇಲ್ಲ ಏನೇ ಆಗಲಿ ಬಿಜೆಪಿ ಬಿಟ್ಟು ಹೋಗಲ್ಲ ಎಂದು ರಮೇಶ್ ಹೇಳಿದರು.
ಬಿಜೆಪಿಗೆ ಯತ್ನಾಳ್ ಅವರ ಅವಶ್ಯಕತೆ ಇದೆ, ಮುಂಬರುವ ಚುನಾವಣೆಯಲ್ಲಿ 128 ಸೀಟ್ ಪಡೆದು ರಾಜ್ಯದ ಚುಕ್ಕಾಣಿ ಮತ್ತೆ ಹಿಡಿಯುತ್ತೇವೆ, ಇದೊಂದು ಕೆಟ್ಟ ಘಳಿಗೆ, ಪಕ್ಷಕ್ಕಾಗಿ ನ್ಯಾಯಯುತವಾಗಿ ದುಡಿದವರು ಸ್ವಾರ್ಥವನ್ನು ಬದಿಗಿಟ್ಟು ಕೆಲಸ ಮಾಡಿದವರು ಘಟನೆಯಿಂದ ಅವರಿಗೆ ನೋವಾಗಿದೆ ಅಷ್ಟೇ ಎಂದರು.