ಬೆಂಗಳೂರು: ನಟ ದರ್ಶನ್ & ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ನಡುವೆ ಕೊಲೆ ಕೇಸ್ ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ವಿಚಾರವಾಗಿ ಸ್ಯಾಂಡಲ್ ವುಡ್ ನಟಿ ರಮ್ಯಾ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ರಮ್ಯಾ, ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಬೇಕು.ಅದನ್ನು ಬಿಟ್ಟು ಅಭಿಮಾನಿಗಳನ್ನು ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? ಸ್ಟಾರ್ ನಟನಾಗಿ ಸಮಾಜಕ್ಕೆ ಯಾವ ಸಂದೇಶಗಳನ್ನು ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಇಂತ ಕೃತ್ಯಗಳನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ನಾವು ಕೊಡುವ ಸಂದೇಶ ಏನು? ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಪೊಲೀಸರು ಈ ಘಟನೆ ಬಗ್ಗೆ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಿ. ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಈ ಹಿಂದೆ ಹಲವು ಪ್ರಕರಣದಲ್ಲಿ ದರ್ಶನ್ ರಾಜಕೀಯ ಪ್ರಭಾವ ಬೀರಿರಬಹುದು. ಆದರೆ ಈ ಹಂತದ ಪ್ರಕರಣದಲ್ಲಿ ರಾಜಕೀಯ ಪ್ರಭಾವ ಬೀರಲು ಸಾಧ್ಯವಿಲ್ಲ. ಈ ಬೆಳವಣಿಗೆ ನಟೋರಿಯಸ್ ಆಗಿದೆ. ನಾನು ಕೂಡ ವಿಡಿಯೋ ನೋಡಿದೆ. ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ.
ಇದನ್ನೆಲ್ಲ ಮಾಡಲು ಹೇಗೆ ಸಾದ್ಯ? ನಟನಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಚಾರಿಟಿ ಅಥವಾ ಇನ್ಯಾವುದೇ ಒಳ್ಳೆಯ ಮಾರ್ಗದ ಮೂಲಕ ಜಮಾಜಕ್ಕೆ ಒಳ್ಳೆಯದನ್ನು ಮಾಡಬಹುದು. ಫ್ಯಾನ್ಸ್ ಕ್ಲಬ್ ಗಳಿಂದ ಕಿಡ್ನ್ಯಾಪ್ ಮಾಡಿಸುವುದು, ಹಲ್ಲೆ ನಡೆಸುವುದು ಎಂದರೆ ಖಂಡನೀಯ. ಚಿತ್ರರಂಗ ಇದನ್ನು ಖಂಡಿಸಬೇಕು ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಯಾರಾದರೂ ಟ್ರೋಲ್ ಮಾಡುತ್ತಿದ್ದರೆ ಬ್ಲಾಕ್ ಮಾಡಬಹುದು. ಎಲ್ಲರಿಗೂ ಆ ಆಯ್ಕೆಯಿದೆ. ಇಲ್ಲವೇ ದೂರು ನೀಡಿ. ನಾನೂ ಈ ಹಿಂದೆ ನನ್ನ ವಿರುದ್ಧ ಟ್ರೋಲ್ ಮಾಡಿದ ಕೆಲವರ ವಿರುದ್ಧ ದೂರು ನೀಡಿದ್ದೆ. ಪೊಲೀಸರು ಅವರನ್ನು ಕರೆದು ಎಚ್ಚರಿಕೆ ನೀಡಿದ ಬಳಿಕ ನಾನು ಕೇಸ್ ವಾಪಾಸ್ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.