ತಮಿಳು ಚಿತ್ರರಂಗದ ನಟ ಕಮಲ್ ಹಾಸನ್‌ರ ಹೇಳಿಕೆ, ‘ಕನ್ನಡ ತಮಿಳಿನಿಂದ ಹುಟ್ಟಿದೆ’ ಎಂಬುದು ಕನ್ನಡಿಗರಲ್ಲಿ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದಾಗಿ ಕಮಲ್ ಅವರು ಕ್ಷಮೆಯಾಚಿಸಬೇಕೆಂದು ಕನ್ನಡಿಗರು ಒತ್ತಾಯಿಸಿದ್ದಾರೆ.
ಇದೀಗ ಕನ್ನಡ ಚಿತ್ರರಂಗದ ನಟಿ, ನಿರ್ದೇಶಕಿ ಹಾಗೂ ಕತೆಗಾರ್ತಿ ರಂಜನಿ ರಾಘವನ್ ಅವರು ಕಮಲ್ ಹಾಸನ್‌ಗೆ ತಾವು ಬರೆದ ಕನ್ನಡ ಪುಸ್ತಕಗಳಾದ ಕಥೆ ಡಬ್ಬಿ ಮತ್ತು ಸ್ವೈಪ್ ರೈಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.
ಕಮಲ್ ಹಾಸನ್‌ರ ಹೇಳಿಕೆಯಿಂದ ಕನ್ನಡಿಗರಲ್ಲಿ ಆಕ್ರೋಶ ಮೂಡಿರುವ ಸಂದರ್ಭದಲ್ಲಿ ರಂಜನಿ, ಕಮಲ್ ಅವರಿಗೆ ಪುಸ್ತಕ ನೀಡಿರುವುದು ‘ಪರ್ಫೆಕ್ಟ್ ಟೈಮಿಂಗ್’ ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ.
ರಂಜನಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡು, ‘ಕಮಲ್ ಸರ್‌ಗೆ ಕನ್ನಡ ಪುಸ್ತಕ’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಜೊತೆಗೆ, ಹಳದಿ ಮತ್ತು ಕೆಂಪು ಬಣ್ಣದ ಎಮೋಜಿಗಳನ್ನು ಬಳಸಿದ್ದಾರೆ.
ಈ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ‘ಸೂಪರ್ ಮೇಡಮ್, ಸರಿಯಾದ ಸಮಯದಲ್ಲಿ ಕನ್ನಡ ಪುಸ್ತಕ ಕೊಟ್ಟಿದ್ದೀರಿ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.




