ಹೈದರಾಬಾದ್(ತೆಲಂಗಾಣ): ‘ಅತಿಥಿ ದೇವೋಭವ’ ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ, ನಮ್ಮ ಸಂಸ್ಕೃತಿಯೂ ಹೌದು. ಆದರೆ, ಅದಕ್ಕೆ ಕುಂದುಂಟು ಬರುವ ಘಟನೆಯೊಂದು ಹೈದರಾಬಾದ್ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಸ್ಥಳೀಯ ಕ್ಯಾಬ್ ಚಾಲಕನೊಬ್ಬ ಜರ್ಮನಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದು, ಎಫ್‌ಐಆರ್ ದಾಖಲಾಗಿದೆ.
ಜರ್ಮನಿಯ 25 ವರ್ಷದ ಯುವತಿ ತನ್ನ ಗೆಳೆಯನನ್ನು ಕಾಣಲು ಹೈದರಾಬಾದ್ಗೆ ಬಂದಿದ್ದರು. ಬಳಿಕ ವಾಪಸ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ಕ್ಯಾಬ್ ಚಾಲಕ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ತನ್ನ ಕಾರಿನಲ್ಲೇ ಅತ್ಯಾಚಾರ ಎಸಗಿ, ಪರಾರಿಯಾಗಿದ್ದಾನೆ.
ಪ್ರಕರಣದ ಪೂರ್ಣ ವಿವರ: ಪೊಲೀಸರ ಪ್ರಕಾರ, ಜರ್ಮನ್ ಯುವತಿ ಹೈದರಾಬಾದ್‌ನಲ್ಲಿರುವ ಸ್ನೇಹಿತನನ್ನು ಭೇಟಿ ಮಾಡಲು ಬಂದಿದ್ದರು. ಇತರ ಸ್ನೇಹಿತರೊಂದಿಗೆ ಕ್ಯಾಬ್‌ನಲ್ಲಿ ನಗರವನ್ನು ಸುತ್ತಾಡಿದ್ದಾರೆ. ಸಂಜೆಯ ಬಳಿಕ ಎಲ್ಲರನ್ನೂ ಮನೆಗಳಿಗೆ ಡ್ರಾಪ್ ಮಾಡಿ, ವಿದೇಶಿ ಯುವತಿಯನ್ನು ವಿಮಾನ ನಿಲ್ದಾಣಕ್ಕೆ ಕರೆತಂದಿದ್ದಾನೆ. ದಾರಿಮಧ್ಯೆ, ಮಾಮಿಡಿಪಲ್ಲಿ ಎಂಬಲ್ಲಿ ನಿರ್ಜನ ಸ್ಥಳದಲ್ಲಿ ವಾಹನ ನಿಲ್ಲಿಸಿ, ಆಕೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಸಂತ್ರಸ್ತೆ ಫೋನ್ ಮೂಲಕ ತುರ್ತು ಸಹಾಯವಾಣಿ 100ಕ್ಕೆ ಕರೆ ಮಾಡಿ ದೂರು ನೀಡಿದ್ದು, ಆಕೆಯನ್ನು ಸ್ಥಳದಿಂದ ರಕ್ಷಿಸಲಾಗಿದೆ. ಸದ್ಯ ಆಕೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ವದಂತಿ ಅಲ್ಲಗಳೆದ ಪೊಲೀಸರು: ವಿದೇಶಿ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಲೆಮರೆಸಿಕೊಂಡ ಆರೋಪಿಗೆ ಶೋಧ ಆರಂಭಿಸಿದ್ದಾರೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ವದಂತಿಯನ್ನು ಪೊಲೀಸರು ನಿರಾಕರಿಸಿದ್ದಾರೆ.