ಬೆಂಗಳೂರು : ಸದನದಲ್ಲಿ ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ ನಾಯಕರಿಗೆ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ತಿರುಗೇಟು ಕೊಟ್ಟಿದ್ದಾರೆ.
ಏನು ತಪ್ಪು ಮಾಡಿದ್ದೇನೆ ಅಂತ ರಾಜೀನಾಮೆ ನೀಡಲಿ. ಇವರು ಹೇಳಿದ ತಕ್ಷಣ ರಾಜೀನಾಮೆ ನೀಡಬೇಕಾ?ಅವರ ಹತ್ತಿರ ಏನು ಸಾಕ್ಷಿ ಇದೆ ಅಂತಾ ತಿಮ್ಮಾಪುರ ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲಿ ಇರುವವನ ಇತಿಹಾಸ ಗೊತ್ತಾ ಇವರಿಗೆ? ಅಬಕಾರಿ ಡಿಸಿ ಸಸ್ಪೆಂಡ್ ಆಗಿದ್ದಾನೆ, ಜೈಲಿಗೆ ಹೋಗಿದ್ದಾನೆ. ಸಿಎಂ ಸೇರಿ ಯಾರೂ ಬೆನ್ನಿಗೆ ನಿಲ್ಲುವ ಅವಶ್ಯಕತೆ ಬರಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ತಿಮ್ಮಾಪುರ ಕಿಡಿಕಾರಿದ್ರು.
ಸದನದಲ್ಲಿ ಗದ್ದಲ ಗಲಾಟೆ ಹಾಗೂ ವಿರೋಧ ಪಕ್ಷಗಳ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದ್ದ ಕಾರಣ ಸಿದ್ದರಾಮಯ್ಯ ಸದನಕ್ಕೆ ಸ್ವಲ್ಪ ತಡವಾಗಿಯೇ ಬಂದರು. ಅದಕ್ಕೂ ಮೊದಲು ಸಿದ್ದರಾಮಯ್ಯ ಅವರನ್ನು ಅವರ ಸರ್ಕಾರಿ ನಿವಾಸದಲ್ಲಿ ತಿಮ್ಮಾಪುರ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ತಿಮ್ಮಾಪುರ, ‘ಬಿಜೆಪಿಯವರು ಹೇಳಿದ ಹಾಗೆ ರಾಜೀನಾಮೆ ಕೊಟ್ಟರೆ ಸರ್ಕಾರ ನಡೆಸಲು ಆಗುತ್ತಾ? ಏನು ಸಾಕ್ಷ್ಯ ಇದೆ ನನ್ನ ವಿರುದ್ಧ? ಇದೊಂದು ರಾಜಕೀಯ ಷಡ್ಯಂತ್ರ’ ಎಂದರು.
‘ಬಿಜೆಪಿಯವರು ತಪ್ಪು ಮಾಡುತ್ತಿದ್ದಾರೆ. ಒತ್ತಡದಿಂದ ಅವರು ಹೀಗೆ ಮಾಡುತ್ತಿದ್ದಂತೆ ಕಾಣಿಸುತ್ತಿದೆ. ನಾನು ಸದನದಲ್ಲಿ ಈಗಾಗಲೇ ಈ ಬಗ್ಗೆ ಮಾತನಾಡಿದ್ದೇನೆ. ಯಾವುದೋ ಅಧಿಕಾರಿ ಫೋನ್‌ನಲ್ಲಿ ಮಾತಾಡಿದರೆ ಅದಕ್ಕೆ ಮತ್ತು ನನಗೆ ಏನು ಸಂಬಂಧ? ಯಾರು ತಪ್ಪು ಮಾಡಿದ್ದಾರೊ ಅವರು ಅನುಭವಿಸ್ತಾರೆ’ ಎಂದರು.




