ಮೈಸೂರು : ಆರ್.ಸಿ.ಬಿ ಸಂಭ್ರಮಾಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ವಹಣೆಯ ವೈಫಲ್ಯ ಖಂಡಿಸಿ ಇಂದು ನಗರದ ಹಾರ್ಡಿಂಜ್ ವೃತ್ತದ ಬಳಿ ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅವರು, ಆರ್‌ಸಿಬಿ ಟ್ರೋಫಿ ಗೆದ್ದ ಸಂಭ್ರಮಾಚರಣೆಯಲ್ಲಿ ಹನ್ನೊಂದು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಸರ್ಕಾರದ ನಿರ್ವಹಣೆ ವೈಫಲ್ಯವೇ ಇದಕ್ಕೆ ಕಾರಣವಾಗಿದೆ.
ಐಪಿಎಲ್ ಪಂದ್ಯಾವಳಿಯನ್ನು ನಿಷೇಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಐಪಿಎಲ್ ರದ್ದುಗೊಳಿಸಿ ಹಾಗೂ ಆರ್‌ಸಿಬಿ ತಂಡವನ್ನು ಬ್ಯಾನ್ ಮಾಡಬೇಕು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕ್ರಿಕೆಟ್ ಮಂಡಳಿಯಿಂದ 5 ಕೋಟಿ ಪರಿಹಾರ ನೀಡಬೇಕು. ಸರ್ಕಾರದಿಂದ 1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ವಾಟಾಳ್ ನಾಗರಾಜ್ ಅಸಮಾಧಾನ ಹೊರಹಾಕಿದರು. ಪ್ರತಿಭಟನೆಗೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದವು.




