Ad imageAd image

ಶಾಲಾ ಶೈಕ್ಷಣಿಕ ವರ್ಷಾರಂಭ: ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಬಿಇಒ

Bharath Vaibhav
ಶಾಲಾ ಶೈಕ್ಷಣಿಕ ವರ್ಷಾರಂಭ: ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಬಿಇಒ
WhatsApp Group Join Now
Telegram Group Join Now

ತುರುವೇಕೆರೆ: ಪಟ್ಟಣದ ಎನ್.ಎಚ್.ಪಿ.ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಶಾಲೆಗೆ ಮಕ್ಕಳನ್ನು ಸ್ವಾಗತಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ 2025-26ನೇ ಸಾಲಿನ ತಾಲ್ಲೂಕಿನ ಶೈಕ್ಷಣಿಕ ವರ್ಷಾರಂಭಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಬಿಇಒ ಸೋಮಶೇಖರ್, ಅಕ್ಷರ ಕಲಿಯಲು ಮಕ್ಕಳು ಶಾಲೆಗೆ ಬಹಳ ಸಂತಸ ಸಂಭ್ರಮದಿಂದ‌ ಬರಬೇಕು. ಈ ನಿಟ್ಟಿನಲ್ಲಿ ಶಾಲಾ ಪ್ರಾರಂಭದ ದಿನವಾದ ಇಂದು ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಪ್ರತಿ ಮಕ್ಕಳಿಗೂ ಹೂವು, ಸಿಹಿ ಪದಾರ್ಥ, ಸಮವಸ್ತ್ರ ಮತ್ತು ವರ್ಣ ರಂಜಿತ ಬಲೂನ್ ಗಳನ್ನು ನೀಡಿ ಸ್ವಾಗತಿಸಲು ಸೂಚನೆ ನೀಡಲಾಗಿದೆ. ಮಧ್ಯಾಹ್ನದ ಬಿಸಿಯೂಟವನ್ನು ಆರಂಭಿಸಲಾಗಿದೆ ಎಂದರು.

ಎನ್.ಹೆಚ್.ಪಿ.ಎಸ್. ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಮುಖ್ಯಶಿಕ್ಷಕರು ಎಲ್.ಕೆ.ಜಿ ಮತ್ತು ಯು.ಕೆ.ಜಿಯನ್ನು ಎಸ್.ಡಿ.ಎಂಸಿ ಸದಸ್ಯರು, ಇಲಾಖೆಯ ಸಹಮತದಲ್ಲಿ ಪ್ರಾರಂಭಿಸಿದ್ದಾರೆ. ಇದರ ಜೊತೆಗೆ 6 ಮತ್ತು 7 ತರಗತಿಗಳಿಗೂ ಆಂಗ್ಲಮಾಧ್ಯಮ ನೀಡಬೇಕೆಂಬ ಮನವಿಯೂ ಸಹ ಮಾಡಿದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದ ಅವರು, ಸ್ಥಳೀಯ ವಿವೇಕ ಯೋಜನೆಯಡಿ ನೂತನ ಕೊಠಡಿಯನ್ನು ಸಹ ಶಾಲಾ ಆವರಣದಲ್ಲಿ ನಿರ್ಮಾಣ ಮಾಡಿಕೊಡಲಾಗಿದೆ. ಅಲ್ಲದೆ ಪಟ್ಟಣ ಪಂಚಾಯಿತಿಯಿಂದ ಶೌಚಾಲಯವನ್ನು ಸಹ ಶಾಲೆಯವರು ನಿರ್ಮಿಸಿದ್ದಾರೆ ಎಂದರು.

ಶಿಕ್ಷಕರು, ಪೋಷಕರು ಮತ್ತು ಅಧಿಕಾರಿಗಳ ಪರಿಶ್ರಮದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ತುರುವೇಕೆರೆ ಸತತ ಎರಡನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.ಈ ಬಾರಿ ಸರ್ಕಾರಿ ಶಾಲೆಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಉನ್ನತಮಟ್ಟದಲ್ಲಿದೆ ಎಂದ ಅವರು, ಈಗಾಗಲೇ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಾಲೆ, ಅನುಧಾನಿತ ಮತ್ತು ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗಿದ್ದು, ದಾಖಲಾತಿ ಹಾಜರಾತಿ ಹೆಚ್ಚಿಸುವಂತೆ ಕ್ರಮ ವಹಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸ್ಕಾಲರ್ ಶಿಫ್, ಶೂ ಸಾಕ್ಸ್,, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಹಾಲು ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ನೀಡುತ್ತಿದ್ದು, ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿರುವುದರಿಂದ ದಿನೇ ದಿನೇ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ತಾಲ್ಲೂಕು ಅಕ್ಷರದಾಸೋಹದ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತ ಮಾತನಾಡಿ, ಎನ್.ಎಚ್.ಪಿ.ಎಸ್ ಶಾಲೆಯ ಸುತ್ತ ಮುತ್ತಲೂ ಹೊಯ್ಸಳ, ದ್ರಾವಿಡ ಕಾಲದ ದೇವಾಲಯಗಳಿವೆ ಹಾಗಾಗಿ ಇದೊಂದು ಆಧ್ಯಾತ್ಮಿಕ ನೆಲೆಯಾಗಿದ್ದು, ಮಕ್ಕಳ ಕಲಿಕೆಗೆ ಉತ್ತಮ ವಾತಾವರಣವಿದೆ. ಪ್ರಸ್ತಕ ಸಾಲಿನಲ್ಲಿ ‘ಎರಡು ವರ್ಷ ಶಿಕ್ಷಣದಲ್ಲಿ ಹರುಷ’ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಮುಖ್ಯ ಶಿಕ್ಷಕರಾದ ನಂ.ರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ್, ಬಿಆರ್.ಸಿ ಸುರೇಶ್, ಬಿಆರ್.ಪಿ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ, ಶಿಕ್ಷಕರುಗಳಾದ ನೇತ್ರಾವತಿ, ಪುಷ್ಪಾವತಿ, ಸವಿತ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

WhatsApp Group Join Now
Telegram Group Join Now
Share This Article
error: Content is protected !!