ಮುಂಬೈ: ಕಳೆದ 16 ವರ್ಷಗಳಲ್ಲೇ ಮೊದಲ ಬಾರಿಗೆ ಕೇರಳದ ಕರಾವಳಿಗೆ ಮುಂಗಾರು ಮಾರುತಗಳು ಮೇ ತಿಂಗಳಿನಲ್ಲಿ ಪ್ರವೇಶಿಸಿದ್ದು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯೊಂದಿಗೆ ಆರಂಭವಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ ಈ ಮೊದಲ ಮುಂಗಾರಿಗೆ ತತ್ತರಿಸಿದ್ದು, ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಸಾಮಾನ್ಯವಾಗಿ ಜೂನ್ 11ರಂದು ಮುಂಬೈಗೆ ಕಾಲಿಡುವ ಮುಂಗಾರು, ಈ ಬಾರಿ 75 ವರ್ಷಗಳಲ್ಲಿ ಮೊದಲ ಬಾರಿಗೆ 15 ದಿನ ಮುಂಚಿತವಾಗಿ, ಮೇ ತಿಂಗಳಿನಲ್ಲಿ ಆಗಮಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮುಂಬೈನ ಸಂಚಾರ ವ್ಯವಸ್ಥೆ ಕುಸಿದಿದೆ.
ವಡಾಲಾ ರಸ್ತೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ ಉಪನಗರ ರೈಲು ಸೇವೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ಮಸೀದಿ ನಿಲ್ದಾಣದಲ್ಲಿ ಹಳಿಗಳ ಮೇಲೆ ನೀರು ನಿಂತಿದ್ದರಿಂದ ಹಾರ್ಬರ್ ರೈಲು ಸೇವೆಗೂ ವ್ಯತ್ಯಯವಾಯಿತು.
ಸುಮಾರು 250 ವಿಮಾನಗಳ ಸಂಚಾರದಲ್ಲಿಯೂ ತೊಂದರೆಯಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಯಿತು.




