ತುರುವೇಕೆರೆ: ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ ಮೇಘಸ್ಪೋಟ ಮತ್ತು ಗುಡುಗು-ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅವಕಾಶ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಪೂಜಾ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು. ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಂಬಂಧಪಟ್ಟ ಅನುಷ್ಟಾನಗೊಲಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ ಅಥವಾ ಹಣಕಾಸು ಸಂಸ್ಥೆ ಅಥವಾ ಕೃಷಿ/ತೋಟಗಾರಿಕೆ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡುವಂತೆ ಅವರು ತಿಳಿಸಿದ್ದಾರೆ.
ತುರುವೇಕೆರೆ ತಾಲ್ಲೂಕಿನಲ್ಲಿ 2025 ನೇ ಸಾಲಿನ ಮುಂಗಾರು ಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದ್ದು, ನೊಂದಣಿ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ. ಗ್ರಾಮ ಪಂಚಾಯಿತಿ ಮಟ್ಟದ ವಿಮಾ ಘಟಕಕ್ಕೆ ತಾಲ್ಲೂಕಿಗೆ ಭತ್ತ (ನೀರಾವರಿ), ರಾಗಿ (ಮಳೆಯಾಶ್ರಿತ) ಬೆಳೆಗಳನ್ನು ಬೆಳೆ ವಿಮೆಗೆ ಅಧಿಸೂಚನೆ ಮಾಡಲಾಗಿದೆ. ಹೋಬಳಿ ಮಟ್ಟದ ವಿಮಾ ಘಟಕಗಳಿಗೆ ಅಲಸಂದೆ (ಮಳೆಯಾಶ್ರಿತ), ರಾಗಿ (ನೀರಾವರಿ), ಹುರುಳಿ (ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ), ಟೊಮ್ಯಾಟೋ, ಎಳ್ಳು ಬೆಳೆಗಳಿಗೆ ವಿಮೆಗೆ ನೋಂದಾಯಿಸಲು ಅಧಿಸೂಚನೆ ಮಾಡಲಾಗಿದೆ. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ಆಸಕ್ತ ರೈತರು ಬೆಳೆ ವಿಮೆಗೆ ನೋಂದಣಿ ಮಾಡಲು ಅಲಸಂದೆ (ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ) ಜುಲೈ 15 ಹಾಗೂ ಎಳ್ಳು(ಮಳೆಯಾಶ್ರಿತ) ಜೂನ್ 30, ಟೊಮ್ಯಾಟೋ ಬೆಳೆಗೆ ಜುಲೈ 15, ಭತ್ತ (ನೀರಾವರಿ) ಮತ್ತು ರಾಗಿ (ಮಳೆಯಾಶ್ರಿತ) ಬೆಳೆಗಳಿಗೆ ಹಾಗೂ ರಾಗಿ (ನೀರಾವರಿ) ಹಾಗೂ ಹುರುಳಿ (ಮಳೆಯಾಶ್ರಿತ), ಬೆಳೆಗಳಿಗೆ ಆಗಸ್ಟ್ 18 ರಂದು ನೊಂದಣಿಗೆ ಕೊನೆಯ ದಿನಾಂಕವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಫಸಲ್ ಭೀಮಾ ಯೋಜನೆ ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೊಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗುವುದು.ಆರ್ಥಿಕ ಸಂಸ್ಥೆಗಳು/ ಬ್ಯಾಂಕ್/ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ತಾವನೆಯನ್ನು ಹಾಗೂ ವಿಮಾ ಕಂತನ್ನು ನಿಗಧಿತ ಸಮಯದೊಳಗೆ ನಿಯಾಮಾನುಸಾರ ಅನುಷ್ಟಾನ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳತಕ್ಕದ್ದು. ನೊಂದಣಿ ಪ್ರಕ್ರಿಯೆಯಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪದೋಷಗಳು ಉಂಟಾದಲ್ಲಿ ಅದರಿಂದ ಆಗುವ ಬೆಳೆ ವಿಮೆ ಪರಿಹಾರ ರಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳೇ ನೇರ ಹೊಣೆಗಾರರಾಗಿರುತ್ತಾರೆ. ಆಸಕ್ತ ರೈತರುಗಳು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ, ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ಬೆಳೆ ವಿಮೆಗೆ ನೊಂದಣಿ ಮಾಡಬಹುದಾಗಿದೆ ಎಂದರು.
ವರದಿ: ಗಿರೀಶ್ ಕೆ ಭಟ್