ಆರ್ ಸಿಬಿ ತಂಡಕ್ಕೆ ಮತ್ತಿಬ್ಬರು ಬಿರುಸಿನ ಬ್ಯಾಟ್ಸಮನ್ ಗಳ ಬೆಂಬಲ
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ ಮುಂದೂಡಲ್ಪಟ್ಟಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಶನಿವಾರದಿಂದ ಪುನರಾರಂಭಗೊಳ್ಳಲ್ಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜಸರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಆರ್‌ಸಿಬಿ ಸದ್ಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದರೇ ಪ್ಲೇಆಫ್ಗೆ ತಲುಪಲಿದೆ.

ಏತನ್ಮಧ್ಯೆ, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯಿಂದಾಗಿ ತವರಿಗೆ ಮರಳಿದ್ದ ವಿದೇಶಿ ಆಟಗಾರರು ವಾಪಸ್ ಕರೆತರುವುದರ ಬಗ್ಗೆ ಎಲ್ಲಾ ಫ್ರಾಂಚೈಸಿಗಳಿಗೆ ಐಪಿಎಲ್ ಮಂಡಳಿ ತಿಳಿಸಿದೆ. ಇದರ ಬೆನ್ನಲ್ಲೇ ವಿದೇಶಿ ಆಟಗಾರರನ್ನು ಕರೆ ತರಲು ಆಯಾ ದೇಶದ ಕ್ರಿಕೆಟ್ ಮಂಡಳಿ ಜೊತೆ ಫ್ರಾಂಚೈಸಿಗಳು ಮಾತುಕತೆ ನಡೆಸಿವೆ. ಸದ್ಯ ಪರಿಸ್ಥಿತಿ ಸುಧಾರಿಸಿದ್ದರಿಂದ ಕೆಲ ಆಟಗಾರರು ಮತ್ತೆ ಭಾರತಕ್ಕೆ ಮರಳುತ್ತಿದ್ದಾರೆ.
ಆರ್‌ಸಿಬಿ ತಂಡವನ್ನು ಪ್ರತಿನಿಧಿಸುವ ವೆಸ್ಟ್ ಇಂಡೀಸ್ ಸ್ಫೋಟಕ ಹಿಟ್ಟರ್ ರೊಮಾರಿಯೊ ಶೆಫರ್ಡ್ ಕೂಡ ಮುಂದಿನ ಪಂದ್ಯಗಳಿಗಾಗಿ ಆರ್‌ಸಿಬಿ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಶೆಫರ್ಡ್ ಎಲ್ಲರ ಗಮನ ಸೆಳೆದಿದ್ದರು. ಇದೀಗ ಅವರು ವಾಪಸ್ಸಾಗಿದ್ದು ತಂಡಕ್ಕೆ ಆನೆಬಲ ಬಂದಂತಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೆಸ್ಟ್ ಇಂಡೀಸ್ ಆಟಗಾರ ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಕೂಡ ಭಾರತಕ್ಕೆ ಆಗಮಿಸಲಿದ್ದಾರೆ. ರಸೆಲ್ ಭಾರತಕ್ಕೆ ವಾಪಾಸ್ಸಾಗುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ರಸೆಲ್ ಜೊತೆಗೆ ರೊಮಾರಿಯೊ ಶೆಫರ್ಡ್, ನರೈನ್ ಮತ್ತು ಕೆಕೆಆರ್ ಮಾರ್ಗದರ್ಶಕ ಡ್ವೇನ್ ಬ್ರಾವೋ ಇದ್ದಾರೆ.
ಮತ್ತೊಂದೆಡೆ ಇಂಗ್ಲೆಂಡ್ನ ಸಿಡಿಲಬ್ಬರದ ಬ್ಯಾಟರ್ ಮತ್ತು ಓಪನರ್ ಫಿಲ್ ಸಾಲ್ಟ್ ಕೂಡ ಮರಳುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಇವರು ಕ್ವಾಲಿಫೈ ಪಂದ್ಯಗಳ ವರೆಗೆ ತಂಡದ ಜೊತೆ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರಣ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಜೂನ್ 6 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಈ ಸರಣಿಗಾಗಿ ಪ್ರಕಟಗೊಂಡ ಇಂಗ್ಲೆಂಡ್ ತಂಡದಲ್ಲಿ ಸಾಲ್ಟ್ ಸ್ಥಾನ ಪಡೆದಿದ್ದಾರೆ. ಈ ಹಿನ್ನೆಲೆ ಐಪಿಎಲ್ ಫೈನಲ್ ಪಂದ್ಯದವರೆಗೂ ಇರಲಿದ್ದಾರ ಅಥವಾ ಇಲ್ಲವೇ ಎಂದು ಕಾದು ನೋಡಬೇಕಿದೆ. ಇಂಗ್ಲೆಂಡ್ನ ಮತ್ತೊಬ್ಬ ಆಲ್ರೌಂಡರ್ ಲಿವಿಂಗ್ ಸ್ಟೋನ್ ಕೂಡ ತಂಡಕ್ಕೆ ವಾಪಸ್ಸಾಗಿದ್ದಾರೆ.




