ಬೆಂಗಳೂರು : ವೀರಶೈವ ಲಿಂಗಾಯತ ಸಭೆ ನಡೆಸದಂತೆ ಬಿಎಸ್ ವೈ ಹಾಗೂ ಬಿವೈ ವಿಜಯೇಂದ್ರ ತಿಳಿಸಿದ್ದರು ಕೂಡ ಮಾಜಿ ಸಚಿವ ರೇಣುಕಾಚಾರ್ಯ ಅವರ ಬಣ ಈ ಆದೇಶವನ್ನು ಗಾಳಿಯಲ್ಲಿ ತೂರಿ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ರೇಣುಕಾಚಾರ್ಯ ಬಣ ವೀರಶೈವ ಲಿಂಗಾಯತ ಸಭೆ ನಡೆಸಲು ತೀರ್ಮಾನಿಸಿದಕ್ಕೆ ಬುಧವಾರ ರೇಣುಕಾಚಾರ್ಯರನ್ನು ಬಿಎಸ್ ಯಡಿಯೂರಪ್ಪ ತಮ್ಮ ಮನೆಗೆ ಕರೆಸಿ ನೀವು ಸಮಾವೇಶ ನಡೆಸಿದರೆ ಇದಕ್ಕೆ ಯಡಿಯೂರಪ್ಪ ಕುಟುಂಬವೇ ಚಿತಾವಣೆ ನೀಡಿದೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ.
ಇದು ಪಕ್ಷದ ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ಉಪಯುಕ್ತವಾದುದಲ್ಲ. ಇದರಿಂದ ಸಮುದಾಯದ ಒಟ್ಟಾರೆ ಐಕ್ಯತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆಮೇಲೆ ಸಭೆಗೆ ಅವರು ಬಂದಿಲ್ಲ, ಇವರು ಬಂದಿಲ್ಲ ಎಂದು ಮನಸ್ತಾಪ ಉಂಟಾಗಿ ಸಮಾಜದ ವಿಭಜನೆಗೂ ಕಾರಣವಾಗುತ್ತದೆ. ಹೀಗಾಗಿ ಶಕ್ತಿ ಪ್ರದರ್ಶನ ದೃಷ್ಟಿಯಿಂದ ಇಂಥ ಸಮಾವೇಶ ಬೇಡ ಎಂದು ಎಂದು ಯಡಿಯೂರಪ್ಪ ತಿಳಿಸಿದ್ದರು.
ಆದರೆ ಇದೀಗ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ನಾವು ಕೂಡ ಅನ್ಯ ಸಮಾಜಗಳಂತೆ ನಾವು ನಮ್ಮ ಸಮಾಜದ ಸಂಘಟನೆಗಳು ಸಭೆ ಮಾಡುತ್ತಿದ್ದೇವೆ. ವೀರಶೈವ – ಲಿಂಗಾಯಿತ ಒಳಪಂಗಡಗಳು ಒಂದಾಗಬೇಕು, ನಮ್ಮ ಶಕ್ತಿ ಎನು ಅಂತ ತೋರಿಸಬೇಕು ಇದೇ ನನ್ನ ಉದ್ದೇಶ ಎಂದು ಹೇಳಿದರು.
ಎಲ್ಲರೂ ಆರ್ಥಿಕ, ಸಾಮಾಜಿಕವಾಗಿ ಬಲಾಡ್ಯರಿಲ್ಲ ಅಂತಹವರಿಗೆ 2ಎ ಮೀಸಲಾತಿ ಸಿಗಬೇಕು. ಸಮಾಜ ಒಡೆದು ಹೋಗಬಾರದು ಇತ್ತೀಚೆಗೆ ನಡೆದ ಜಾತಿ ಗಣತಿ ಅವೈಜ್ಞಾನಿಕವಾಗಿವೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮಹಾಸಂಗಮ ನಡೆಸುತ್ತೇವೆ. ಈ ಸಭೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.




