ದಾವಣಗೆರೆ: ರೈತರ ಜಮೀನನ್ನು ವಕ್ಫ್ ಬೋರ್ಡ್ ಸ್ವಾದೀನಪಡಿಸಿಕೊಳ್ಳುತ್ತಿದೆ ಎಂಬ ಆರೋಪದ ಹಿನ್ನೆಲೆ ಬಿಜೆಪಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿದೆ.
ಇದೇ ಸಂದರ್ಭ ಸಚಿವ ಜಮೀರ್ ಅಹಮದ್ ಖಾನ್ ಅವರು ಹೆಚ್ಚು ಹುಚ್ಚಾಟ ನಡೆಸಿದರೆ ಪಾಕಿಸ್ತಾನಕ್ಕೆ ಓಡಿಸಿ ಬಿಡುತ್ತೇವೆ ಹುಷಾರ್ ಎಂದು ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಜಮೀರ್ ಒಬ್ಬ ಮತಾಂಧ. ವಸತಿ ಖಾತೆ ಸಚಿವ ಎನ್ನುವುದನ್ನು ಮರೆತು ಆಸ್ತಿ ಕಬಳಿಕೆ ಮಾಡುತ್ತಿದ್ದಾರೆ. ಜಮೀರ್ ಅಹ್ಮದ್ ಹುಚ್ಚಾಟ ನಡೆಸಿದರೆ ಪಾಕಿಸ್ತಾನಕ್ಕೆ ಓಡಿಸುತ್ತೇವೆ ಹುಷಾರ್ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಕುರ್ಚಿ ಕಂಟಕ ಇದೆ. ಉಪಚುನಾವಣೆಯ ಬಳಿಕ ನಿಮ್ಮವರೇ ಕುರ್ಚಿಯಿಂದ ಕೆಳಗೆ ಇಳಿಸುತ್ತಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ಉಪಚುಣಾವಣೆಗೋಸ್ಕರ ರೈತರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಕ್ಫ್ ಬೋರ್ಡ್ ತಿದ್ದುಪಡಿ ಮಾಡಲು ಮೋದಿಗೆ ಬೆಂಬಲ ನೀಡಬೇಕು. ನಾನು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದೇನೆ. ರೈತರಿಗೆ ಪರಿಹಾರ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದಿಲ್ಲ. ವಕ್ಫ್ ಆಸ್ತಿ ರಕ್ಷಣೆ ಮಾಡಲು 35 ಸಾವಿರ ಕೋಟಿ ರೂ. ಹಣ ಮಾಡುತ್ತೀರಿ 5 ಗ್ಯಾರಂಟಿಯಂತೆ ಆರನೇ ಗ್ಯಾರಂಟಿ ವಕ್ಫ್ ಬೋರ್ಡ್ ಆಸ್ತಿ ಉಳಿಸುವುದು ಎಂದು ಕಿಡಿಕಾರಿದರು.