ಬೆಂಗಳೂರು: ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ನೀಡಿದ್ದ ಹೇಳಿಕೆಯು ಅಸೂಕ್ಷ್ಮವಾಗಿದ್ದು, ನಾನು ತೀವ್ರವಾಗಿ ಖಂಡಿಸುತ್ತೇನೆ.
ಭಾರತದ ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯಿತ್ತು. ಆಗಿನ ಸ್ಥಿತಿ ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರು ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ ಎಂದರು.
ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ಹಾಗೂ ಅವರ ಸಂವಿಧಾನ ಎಂಬುದನ್ನು ನಾನು ಎದೆ ಕಟ್ಟಿಕೊಂಡು ಹೇಳುತ್ತೇನೆ ಎಂದರು.
ಅಸ್ಪೃಶ್ಯತೆ ಅನುಭವಿಸಿದ ನಮ್ಮ ಜನರು, ಇಲ್ಲಿನ ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಅಮಿತ್ ಶಾ ಅವರ ದೇವರ ಹೆಸರನ್ನು ಹೇಳುತ್ತಾ ಕೂತಿದ್ದರೆ ಇಷ್ಟೊತ್ತಿಗೆ ಅವರೆಲ್ಲರೂ ದೇವರ ಪಾದ ಸೇರಬೇಕಾಗಿತ್ತು ಎಂದು ಟೀಕಿಸಿದರು.