ಹಾಸನ: “ಶೀಘ್ರದಲ್ಲಿಯೇ ಪೃಥ್ವಿಯ ಸುತ್ತ ಮಾನವ ಸುತ್ತುವಂತೆ ಮಾಡುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಧನೆ ಮಾಡಲು ಪ್ರಯತ್ನಪಟ್ಟಿದ್ದು, ಒಂದೆರಡು ವರ್ಷಗಳಲ್ಲಿ ಅದನ್ನು ಪ್ರಯೋಗಾತ್ಮಕವಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದೆ” ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ನಡೆದ ನವೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಈ ವರ್ಷ ಅಥವಾ ಮುಂದಿನ ವರ್ಷ ಮಾನವರಹಿತ ಮೇಲ್ಮೈ ವಾಹನವನ್ನು ಕಳುಹಿಸುವ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿದ್ದು, ಇದರ ಯಶಸ್ಸಿನ ಬಳಿಕ ಮಾನವನನ್ನು ಪೃಥ್ವಿಯ ಸುತ್ತ ಸುತ್ತುವಂತೆ ಮಾಡುವ ಸಂಶೋಧನೆ ಪ್ರಯತ್ನದಲ್ಲಿದೆ. ಈ ವರ್ಷ NISAR Synthetic Aperture Radar ಎಂಬ ಉಪಗ್ರಹ ಉಡಾವಣೆ ಮಾಡುವ ಪ್ರಯತ್ನದಲ್ಲಿದ್ದು, ಬಳಿಕ Spadex and Chaser ಉಪಗ್ರಹ ಉಡಾವಣೆ ಮಾಡುವ ನಿಟ್ಟಿನಲ್ಲಿ ಎರಡು ಪ್ರಯತ್ನ ಮಾಡಲಾಗಿದೆ. chaser ಎಂಬ ಉಪಗ್ರಹದ ಹೆಸರನ್ನು Target ಎಂಬುದಾಗಿ ಬದಲಾವಣೆ ಮಾಡಿ ಉಡಾವಣೆ ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. ಡಾಕಿಂಗ್ ಮತ್ತು ಅನ್ ಡಾಕಿಂಗ್ ಮಾಡುವ ಕೆಲಸ ನಡೆಯುತ್ತಿದ್ದು, Vedas mission, ಜೊತೆಗೆ ಜಪಾನ್ ನಡುವೆ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೊಸ ಹೊಸ ಸಂಶೋಧನೆಗಳತ್ತ ಇಸ್ರೋ ದಾಪುಗಾಲು ಇಟ್ಟಿದೆ” ಎಂದರು.
“ಸುನಿತಾ ವಿಲಿಯಮ್ಸ್ ಈಗಾಗಲೇ ಸುರಕ್ಷಿತವಾಗಿ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಸುನಿತಾರ ದೇಹದಲ್ಲಿ ಆದ ಬದಲಾವಣೆಯನ್ನು ಸುಧಾರಣೆ ಮಾಡಿಕೊಳ್ಳಲು ಅವರಿಗೆ ವಿಶ್ರಾಂತಿ ಜೀವನಕ್ಕೆ ಅನುವು ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಅವರು ಭಾರತಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸುನಿತಾ ವಿಲಿಯಮ್ಸ್ ಅವರು ಉಪಗ್ರಹದಲ್ಲಿದ್ದಾಗಲೇ ಅವರ ಹುಟ್ಟುಹಬ್ಬವನ್ನು ಬೆಂಗಳೂರಿನ ಶಾಲೆ ಆಯೋಜನೆ ಮಾಡಿರುವುದು ವಿಶೇಷ” ಎಂದು ಖುಷಿಪಟ್ಟರು.
“ಇನ್ನು ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ನವೋತ್ಸವ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆದಿದ್ದು ಇದರಲ್ಲಿ ಭಾಗವಹಿಸಿದ್ದು ಬಹಳ ಖುಷಿ ತಂದಿದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಣದ ಮೂಲಕ ಜೀವನವನ್ನು ನಿಭಾಯಿಸಲು ಸಾಧ್ಯವಿಲ್ಲ ಅದರ ಜೊತೆಗೆ ಇತರೆ ಚಟುವಟಿಕೆಗಳನ್ನು ಕಲಿತಾಗ ಮಾತ್ರ ಜೀವನದಲ್ಲಿ ಬರುವ ಎಲ್ಲಾ ಕಷ್ಟ ಸುಖಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಕಲಿಯಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ತಮ್ಮ ಸುಪ್ತ ಪ್ರತಿಭೆಗಳನ್ನು ಅನಾವರಣ ಮಾಡಿದಾಗ ಮಾತ್ರ ಅವರನ್ನು ಗುರುತಿಸಲು ಸಾಧ್ಯ. ಅಂತಹ ಕಾರ್ಯವನ್ನು ಎಂ.ಎಸ್.ರಾಮಯ್ಯ ಕಾಲೇಜು ಮಾಡುತ್ತಿದೆ” ಎಂದು ಅಭಿಪ್ರಾಯಪಟ್ಟರು.