ವಿಜಯಪುರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿದ ಬೆನ್ನಲ್ಲೇ ಇದೀಗ ಪಕ್ಷದಲ್ಲಿ ಬಿರುಗಾಳಿ ಸೃಷ್ಟಿಯಾಗಿದೆ.
ಯತ್ನಾಳ್ ಅವರ ಬೆಂಬಲಿಗರಿಂದ ರಾಜೀನಾಮೆ ಪರ್ವ ಆರಂಭಗೊಂಡಿದೆ. ಉಚ್ಚಾಟನೆ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕುತ್ತಿರುವ ಅನೇಕ ಪದಾಧಿಕಾರಿಗಳು ಪಕ್ಷದಿಂದ ಹೊರ ನಡೆಯುತ್ತಿದ್ದಾರೆ.
ಇದರ ಭಾಗವಾಗಿ ವಿಜಯಪುರ ನಗರ ಮಂಡಲದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ SC/ST ಮೋರ್ಚಾ, ರೈತ ಮೋರ್ಚಾಗಳ ಸುಮಾರು 174 ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಉಚ್ಚಾಟನೆ ಎಂಬ ಬಿಜೆಪಿಯ ಹೈಕಮಾಂಡ್ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನೇರ ಮತ್ತು ಹಿಂದೂಗಳ ಪರವಾಗಿ ಧ್ವನಿ ಎತ್ತುವ ಮತ್ತು ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ವಿರೋಧಿಸಿದ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದ್ದರಿಂದ ಕಾರ್ಯಕರ್ತರಿಗೆ ನೋವಾಗಿದೆ.
ನಮ್ಮ ಉತ್ತರ ಕರ್ನಾಟಕ ಭಾಗದ ಅನ್ಯಾಯದ ವಿರುದ್ಧ ಹೋರಾಡುವಂತಹ ನಾಯಕನನ್ನು ಉಚ್ಚಾಟನೆ ಮಾಡಿದ್ದು ಸರಿಯಲ್ಲ ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಂಕರ ಹೂಗಾರ ಅವರ ರಾಜೀನಾಮೆಯ ಪತ್ರವನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.