ಬೆಂಗಳೂರು: ನಿವೃತ್ತ ಡಿಜಿ-ಐಜಿಪಿ ಓಂಪ್ರಕಾಶ್ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೇ ಸ್ಪೋಟಕ ಮಾಹಿತಿಗಳು ಹೊರಬರುತ್ತಿವೆ.
ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಇಂದು ಓಂಪ್ರಕಾಶ್ ರಾವ್ ಅವರನ್ನು ಪತ್ನಿ ಪಲ್ಲವಿಯೇ ಚಾಕುವಿನಿಂದ ಇರಿದು ಕಗ್ಗೊಲೆ ಮಾಡಿದ್ದಾಳೆಂದು ಮೊದಲು ಆರೋಪಗಳು ಕೇಳಿಬಂದಿದ್ದವು.
ಇದೀಗ ಪಲ್ಲವಿ ಮಾತ್ರವಲ್ಲ ಆಕೆಯ ಜೊತೆ ಮಗಳೂ ಕೈಜೋಡಿಸಿ ಇಬ್ಬರೂ ಸೇರಿ ಓಂಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ಪಲ್ಲವಿ ಮತ್ತು ಪುತ್ರಿ ಸೇರಿ ಓಂಪ್ರಕಾಶ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಇಬ್ಬರೂ ಸೇರಿ ಹೊಟ್ಟೆ ಭಾಗ ಸೇರಿದಂತೆ ಹಲವೆಡೆ 10 ಕ್ಕೂ ಹೆಚ್ಚು ಬಾರಿ ಚುಚ್ಚಿ ಸಾಯಿಸಿದ್ದಾರೆ.
ಚಾಕು ಇರಿತದಿಂದ ಓಂ ಪ್ರಕಾಶ್ ಅವರ ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಇನ್ನು, ಹೊಟ್ಟೆ ಭಾಗಕ್ಕೆ ಸುಮಾರು 4-5 ಬಾರಿ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಮನೆಯ ತುಂಬೆಲ್ಲ ರಕ್ತದ ಕೋಡಿ ಹರಿದಿದೆ.
ಓಂ ಪ್ರಕಾಶ್ ಅವರು ಸುಮಾರು 15-20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಪತಿಯ ನರಳಾಟವನ್ನು ಪತ್ನಿ ಪಲ್ಲವಿ ನೋಡುತ್ತಾ ನಿಂತಿದ್ದು, ಬಳಿಕ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟಿದ್ದಾರೆಂದು ತಿಳಿದುಬಂದಿದೆ. ಇಷ್ಟೆಲ್ಲಾ ಆದ ಬಳಿಕ ಪತ್ನಿ ಪಲ್ಲವಿ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಈಗಾಗಲೇ ಪ್ರಕರಣ ಸಂಬಂಧ ಹತರಾದ ಓಂಪ್ರಕಾಶ್ ಅವರ ಪುತ್ರ ನೀಡಿರುವ ದೂರಿನಡಿ ಪಲ್ಲವಿ ಮತ್ತು ಮಗಳನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹತ್ಯೆಗೆ ನಿಖರ ಕಾರಣ ಏನು ಎಂಬುವುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.