ಹುಬ್ಬಳ್ಳಿ : ಐದು ವರ್ಷದ ಬಾಲಕಿ ಕೊಲೆ ಮಾಡಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾದ ರಿತೇಶಕುಮಾರ ಅಂತ್ಯ ಸಂಸ್ಕಾರಕ್ಕೆ ಕೋರ್ಟ್ ಆದೇಶಿಸಿದೆ. ಇದರಿಂದಾಗಿ ಕೆಎಂಸಿಆರ್‌ಐ, ಸಿಐಡಿ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ ಈತನ ಮೂಲ ಯಾವುದು? ಕುಟುಂಬಸ್ಥರು ಯಾರು? ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.
ಏ. 13 ರಂದು ರಿತೇಶಕುಮಾರ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲೆಡೆ ತೀವ್ರ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಇದರಿಂದ ಪೊಲೀಸರು ಒತ್ತಡಕ್ಕೆ ಮಣಿದು ಸಂಜೆ ವೇಳೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ಆತ ಇದ್ದ ಶೆಡ್ ಬಳಿ ಕರೆದುಕೊಂಡು ಹೋಗಿದ್ದರು. ರಾಯನಾಳ ಬ್ರಿಡ್ಜ್ ಬಳಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ಈತ ಪರಾರಿಯಾಗುವ ತನ್ನ ಪ್ರಯತ್ನ ಮಾತ್ರ ಮುಂದುವರೆಸಿದ್ದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಈತನ ಮೇಲೆ ಗುಂಡು ಹಾರಿಸಿದ್ದರು. ಆಗ ಈತ ಸಾವಿಗೀಡಾಗಿದ್ದ.