Ad imageAd image

ಗ್ರೀನ್ ಟ್ಯಾಕ್ಸ್ ರದ್ದತಿ | ಕರ್ನಾಟಕ-ಕೇರಳ ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ.

Bharath Vaibhav
ಗ್ರೀನ್ ಟ್ಯಾಕ್ಸ್ ರದ್ದತಿ | ಕರ್ನಾಟಕ-ಕೇರಳ ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ.
WhatsApp Group Join Now
Telegram Group Join Now

ಚಾಮರಾಜನಗರ: ಗ್ರೀನ್ ಟ್ಯಾಕ್ಸ್ ರದ್ಧತಿ (ಹಸಿರು ಸುಂಕ), ಕೇರಳ ತ್ಯಾಜ್ಯ ಗುಂಡ್ಲುಪೇಟೆ ಭಾಗಕ್ಕೆ ಸಾಗಣೆ ತಡೆಯುವುದು, ಅತಿ ಭಾರ ಹೊತ್ತ ವಾಹನಗಳ ಸಂಚಾರ ನಿಷೇಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ (ವಾಸುದೇವ ಮೇಟಿ ಬಣ)ದ ವತಿಯಿಂದ ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯ ಕರ್ನಾಟಕ-ಕೇರಳ ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ
ಮದ್ದೂರು ಚೆಕ್ ಪೋಸ್ಟ್ ಬಳಿ ಜಮಾವಣೆಗೊಂಡ ಸಂಘದ ಪದಾಧಿಕಾರಿಗಳು ಆರ್‌ಟಿಒ, ಅರಣ್ಯ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

‘ಕೇರಳಕ್ಕೆ ಕಟ್ಟಡ ಹಾಗೂ ಕಾರ್ಖಾನೆ ನಿರ್ಮಾಣ ಸಾಮಗ್ರಿ ಸಾಗಿಸುವ 16ರಿಂದ 18 ಚಕ್ರದ ವಾಹನಗಳು ಬಂಡೀಪುರದ ಕಾಡಿನೊಳಗೆ ಸಂಚರಿಸಲು ಅವಕಾಶ ಮಾಡಬಾರದು. ಸ್ಥಳೀಯವಾಗಿ (ಕೆ.ಎ-10) ನೋಂದಣಿಯಾಗಿರುವ ವಾಹನಗಳಿಗೆ ನಿಯಮ ಮೀರಿ ಗ್ರೀನ್ ಟ್ಯಾಕ್ಸ್ ಪಡೆಯುವುದನ್ನು ಕೈಬಿಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಎರಡು ಬಾರಿ ಪತ್ರ ಬರೆದರೂ ಲೋಕೋಪಯೋಗಿ ಇಲಾಖೆಯವರು ಅತಿ ಭಾರ ಹೊತ್ತ ವಾಹನಗಳಿಗೆ ದಂಡ ವಿಧಿಸುವಲ್ಲಿ ವಿಫಲವಾಗಿದ್ದಾರೆ. ಈ ವಿಷಯದಲ್ಲಿ ನೀವು ನಿರ್ಲಕ್ಷ್ಯ ವಹಿಸಿದ್ದೀರಿ ಎಂದು ಸ್ಥಳದಲ್ಲಿದ್ದ ಪೊಲೀಸ್‌ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

’16 ಚಕ್ರದ ವಾಹನಗಳಿಗೆ ಪ್ರವೇಶ ನೀಡುವುದಿಲ್ಲ. ರಸ್ತೆಯ ಭಾರ ಮಿತಿಗೆ ತಕ್ಕಂತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ಆರ್‌ಟಿಒ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.

ವಾಹನ ಸಂಚಾರ ನಿಷೇಧದ ನಡುವೆ ರಾತ್ರಿ ಒಂಬತ್ತರ ನಂತರ ಹಣ ಪಡೆದು ವಾಹನಗಳನ್ನು ಬಿಡುವ ಆರೋಪದ ಬಗ್ಗೆ ಪರಿಶೀಲಿಸಿ ಇನ್ನೆರಡು ದಿನದಲ್ಲಿ ಕ್ರಮ ವಹಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.

ಡಿ.6ರೊಳಗೆ ರೈತ ಮುಖಂಡರ ಸಭೆ ಕರೆದು ಲೋಪದೋಷ ಸರಿಪಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಿದರು.

ರಸ್ತೆ ತಡೆ ನಡೆಸಿದ್ದರಿಂದ ಕರ್ನಾಟಕ- ಕೇರಳ ಗಡಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು, ಜಿಲ್ಲಾ ಕಾರ್ಯಾಧ್ಯಕ್ಷ ಬೆಟ್ಟದಮಾದಳ್ಳಿ ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಹಾಲಹಳ್ಳಿ ಮಹೇಶ್, ತಾಲ್ಲೂಕು ಕಾರ್ಯದರ್ಶಿಬೆಟ್ಟಹಳ್ಳಿ ಗುರು, ಹಸಿರು ಸೇನೆ ಅಧ್ಯಕ್ಷ ಹಿರಿಕಾಟಿ ಚಿಕ್ಕಣ್ಣ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಶಿಂಡನಪುರ ರಘು, ನಂದೀಶ, ಶಂಭುಲಿಂಗಪ್ಪ, ವೃಷಬೇಂದ್ರ, ಸೀಗೆವಾಡಿ ಮಹೇಶ್, ಸೋಮು, ಕೂತನೂರು ಮಣಿಕಂಠ, ಬೆಟ್ಟಳ್ಳಿ ಪ್ರಭು, ನಾಗೇಂದ್ರ, ಕಬ್ಬಹಳ್ಳಿ ಪ್ರಕಾಶ್ ಹಾಜರಿದ್ದರು.

 

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!