ತುರುವೇಕೆರೆ : ಮಾನವತಾವಾದಿ ಮದರ್ ತೆರೆಸಾ ಅವರ ಜನ್ಮದಿನದ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ಅಭಿನೇತ್ರಿ ಮೆಡಿಕಲ್ಸ್ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಡಾ.ಚೌದ್ರಿ ನಾಗೇಶ್, ಮದರ್ ತೆರೆಸಾ ಅವರು ಬೇರೆ ದೇಶದಲ್ಲಿ ಜನಿಸಿದರೂ ಸಹ ಭಾರತ ದೇಶಕ್ಕೆ ಬಂದು ಕೊಲ್ಕತ್ತಾದಲ್ಲಿ ನೆಲೆಸಿ ಇಲ್ಲಿನ ಬಡವರು, ಅನಾಥರು, ರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಮಾನವತಾವಾದಿಯಾಗಿದ್ದಾರೆ. ಮದರ್ ತೆರೆಸಾ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿದರೆ, ವಿಶ್ವ ಮಟ್ಟದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ರೋಟರಿ ಕ್ಲಬ್ ರಕ್ತದಾನ ಸಮಿತಿ ಸದಸ್ಯ ಎಂ.ನರಸಿಂಹಮೂರ್ತಿ ಮಾತನಾಡಿ, ಆಗಸ್ಟ್ 25 ಕ್ಕೆ ಮದರ್ ತೆರೆಸಾ ಅವರು ಜನಿಸಿ 115 ವರ್ಷಗಳಾಗಲಿದೆ. ಆರೋಗ್ಯ ಸುಧಾರಣಾ ವ್ಯವಸ್ಥೆಯಲ್ಲಿ ಬಹಳ ಮುಂಚೂಣಿಯಲ್ಲಿ ನಿಂತು ಕೆಲಸ ನಿರ್ವಹಿಸುವವರು ಆರೋಗ್ಯ ಸಹಾಯಕಿಯರು. ಮದರ್ ತೆರೆಸಾ ಅವರು ದಾದಿಯಾಗಿ ಬಡವರ, ರೋಗಿಗಳ ಸೇವೆಯಲ್ಲಿ ನಿರತರಾಗಿದ್ದ ಹಿನ್ನೆಲೆಯಲ್ಲಿ ಪ್ರಸ್ತುತ ರೋಗಿಗಳ ಶುಶ್ರೂಶೆಯಲ್ಲಿ ತೊಡಗಿರುವ ಆಸ್ಪತ್ರೆಯ ಆರೋಗ್ಯ ಸಹಾಯಕಿಯರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಿ ಆ ಮೂಲಕ ಮಾತೃಹೃದಯಿ ತೆರೆಸಾ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಬ್ರಿಟಿಷರ ಕಪಿಮುಷ್ಟಿಯಲ್ಲಿತ್ತು. ಅನ್ನ, ಆಹಾರ, ವಸತಿ, ಬಟ್ಟೆ ಸೇರಿದಂತೆ ಎಲ್ಲದಕ್ಕೂ ಕಷ್ಟಪಡುವ ಪರಿಸ್ಥಿತಿ. ಬಡವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಚಿಕಿತ್ಸೆ ಎನ್ನುವುದು ಮರೀಚಿಕೆಯಾಗಿತ್ತು. ವೈದ್ಯಕೀಯ ಕ್ಷೇತ್ರ ಅಷ್ಟೊಂದು ಬೆಳೆದಿರಲಿಲ್ಲ. ಬಡವರಿಗೆ ಅನಾರೋಗ್ಯ ಬಂದರೆ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುವ ಸ್ಥಿತಿ ಇತ್ತು. ಇದನ್ನೆಲ್ಲಾ ಕಣ್ಣಾರೆ ಕಂಡ ಮದರ್ ತೆರೆಸಾ ಅವರು ಬಡವರಿಗೆ ಆರೋಗ್ಯ ಕಾಪಾಡಲು ಅಗತ್ಯ ವೈದ್ಯಕೀಯ ಸೇವೆ ನೀಡಿದರು. ಮಿಷನರಿ ಸ್ಥಾಪಿಸಿ ಆ ಮೂಲಕ ಕಡುಬಡವರ, ದೀನದಲಿತರ, ರೋಗಿಗಳ ಸೇವೆ ಮಾಡಿದರು. ಇವರ ನಿಸ್ವಾರ್ಥ ಸೇವೆಗೆ ಅನೇಕ ಮಂದಿ ಕೈಜೋಡಿಸಿದರು. ತೆರೆಸಾ ಅವರ ನಿಸ್ವಾರ್ಥ ಸೇವೆ ಸರ್ವಕಾಲಕ್ಕೂ ಆದರ್ಶನೀಯ ಹಾಗೂ ಮಾದರಿಯಾದುದು ಎಂದರು.
ಇದೇ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಚೌದ್ರಿ ನಾಗೇಶ್, ಡಾ.ರಂಗನಾಥ್, ಡಾ.ನರೇಂದ್ರ ಗುಪ್ತ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸುನಿಲ್, ಖಜಾಂಚಿ ಪ್ರಸನ್ನಕುಮಾರ್, ನೇತ್ರ ತಜ್ಞ ಡಾ. ನರೇಂದ್ರ ಗುಪ್ತ, ರೋಟರಿ ಪದಾಧಿಕಾರಿಗಳಾದ ಅರಳೀಕೆರೆ ಲೋಕೇಶ್, ಅಂಜನ್ ಕುಮಾರ್, ಪ್ರಕಾಶ್ ಗುಪ್ತ, ಸಂತೋಷ್, ಉಪೇಂದ್ರ ಸೇರಿದಂತೆ ಆಸ್ಪತ್ರೆಯ ಆರೋಗ್ಯ ಸಹಾಯಕಿಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




