ತುರುವೇಕೆರೆ : ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ನಿಧಿ ಸಂಗ್ರಹ ಉದ್ದೇಶದಿಂದ ರೋಟರಿ ಕ್ಲಬ್ ಜನವರಿ 17 ರಂದು ಸಂಜೆ 5.30 ಕ್ಕೆ ತುರುವೇಕೆರೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತಂಡದವರಿಂದ “ರೋಟರಿ ಸ್ಟಾರ್ ಸಂಭ್ರಮ” ಸಂಗೀತ ಸಂಜೆ ಕಾರ್ಯಕ್ರಮವನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್. ಉಮೇಶ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷದಿಂದ ರೋಟರಿ ಕ್ಲಬ್ ತುರುವೇಕೆರೆ ತಾಲ್ಲೂಕಿನ ಜನರಿಗೆ ಒಂದಲ್ಲಾ ಒಂದು ರೀತಿಯ ಸೇವೆ ನೀಡುತ್ತಾ ಬಂದಿದೆ. ಈ ಬಾರಿ ತಾಲ್ಲೂಕಿನ ಜನತೆಗೆ ಸಂಗೀತದ ರಸದೌತಣವನ್ನು ಉಣಬಡಿಸುವ ಜೊತೆಗೆ ಆ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಕಲ್ಯಾಣ ನಿಧಿ ಸಂಗ್ರಹಿಸುವ ಉದ್ದೇಶವನ್ನು ಹೊಂದಲಾಗಿದೆ. ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಐದರಿಂದ ಆರು ಸಾವಿರ ಜನರು ಬರುವ ನಿರೀಕ್ಷೆ ಹೊಂದಲಾಗಿದೆ. ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಸಂಜೆಯ ಟಿಕೆಟ್ ಖರೀದಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಬೇಕು ಹಾಗೂ ಬಡವಿದ್ಯಾರ್ಥಿಗಳಿಗೆ ನೆರವಾಗಬೇಕೆಂದರು.
ಸಂಗೀತ ಸಂಜೆಯ ದಿನದಂದು ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಕೊಡಗೀಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, 11.30 ಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸ್ತನ್ಯಪಾನಕ್ಕಾಗಿ ಶಿಶುಪಾಲನಾ ಕೊಠಡಿ ಉದ್ಘಾಟನೆ, ಮಧ್ಯಾಹ್ನ 1 ಗಂಟೆಗೆ ತಾಲೂಕು ಕಛೇರಿ ಮುಂಭಾಗ ದೊಡ್ಡ ಗಡಿಯಾರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ರೋಟರಿ ಸ್ಟಾರ್ ಸಂಭ್ರಮ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ರಾಜ್ಯಪಾಲೆ ರೋ.ಎಲಿಜಬೆತ್ ಚೆರಿಯನ್, ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಲಿದ್ದಾರೆ. ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಬೆಮೆಲ್ ಕಾಂತರಾಜು ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆಂದರು.
ಗೋಷ್ಟಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸುನಿಲ್, ಖಜಾಂಚಿ ಪ್ರಸನ್ನಕುಮಾರ್, ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್, ರೋಟರಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಗುಪ್ತ ಸೇರಿದಂತೆ ರೋಟರಿ ಪದಾಧಿಕಾರಿಗಳು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




