ಪಾಂಡ್ಯಾ, ತಿಲಕ್ ವರ್ಮಾ ಹೋರಾಟ ವೈಫಲ್ಯ: ಕುನಾಲ್ ಪಾಂಡ್ಯಗೆ ನಾಲ್ಕು ವಿಕೆಟ್
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ರಾತ್ರಿ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ ಪಂದ್ಯದಲ್ಲಿ 12 ರನ್ ಗಳಿಂದ ಮಣಿಸಿತು.
ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 221 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ಗೆ 209 ರನ್ ಗಳಿಸಿ 12 ರನ್ ಗಳಿಂದ ವೀರೋಚಿತ ಸೋಲು ಅನುಭವಿಸಿತು.
ಈ ಗೆಲುವಿನೊಂದಿಗೆ ಆರ್ ಸಿಬಿ ತಂಡ ತಾನಾಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು 6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ತಂಡವನ್ನು 4 ನೇಸ ಸ್ಥಾನಕ್ಕೆ ದೂಡಿತು. ಒಂದು ಹಂತದಲ್ಲಿ 99 ಕ್ಕೆ 4 ವಿಕೆಟ್ ಗಳನ್ನು ಬಹು ಬೇಗ ಚೆಲ್ಲಿದ ಮುಂಬೈ ಇಂಡಿಯನ್ಸ್ ಸುಲಭವಾಗಿ ಸೋಲಪ್ಪಿಕೊಳ್ಳಲಿದೆ ಎಂದೆನಿಸಿತ್ತು. ಆದರೆ ತಿಲಕ್ ವರ್ಮಾ ಹಾಗೂ ಹಾರ್ಧಿಕ ಪಾಂಡ್ಯ ಕೇವಲ 35 ಎಸೆತಗಳಲ್ಲಿ 87 ರನ್ ಗಳನ್ನು ಕ್ಷಿಪ್ರ ಗತಿಯಲ್ಲಿ ಕಲೆ ಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ರನ್ ಸರಾಸರಿ ಒತ್ತಡದಲ್ಲಿ ಕೊನೆಗೆ ಸತತ ವಿಕೆಟ್ ಗಳನ್ನು ಚೆಲ್ಲಿತು.
ತಿಲಕ ವರ್ಮಾ 29 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ಹಾರ್ಧಿಕ ಪಾಂಡ್ಯಾ ಕೇವಲ 15 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಕುನಾಲ್ ಪಾಂಡ್ಯಾ 45 ಕ್ಕೆ 4 ವಿಕೆಟ್ ಪಡೆದರು.
ಇದಕ್ಕೆ ಮುನ್ನ ಮೊದಲು ಆಡಿದ ರಾಯಲ್ ಚಾಲೆಂಜರ್ಸ್ ಪರ ವಿರಾಟ್ ಕೊಹ್ಲಿ ಇಂದು ಪಿಲಿಪ್ ಸಾಲ್ಟ್ ರೊಂದಿಗೆ ಇನ್ನಿಂಗ್ಸ್ ಆರಂಭಿಸಿ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಇಳಿದರು. 42 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ತಂಡದ ಮೊದಲ ವಿಕೆಟ್ 4 ರನ್ ಗಳಾಗುವಷ್ಟರಲ್ಲಿುಉರುಳಿತಾದರೂ ಕನ್ನಡದ ಹುಡುಗ ದೇವದತ್ತ ಪೆಡಿಕಲ್ ಹಾಗೂ ಕೊಹ್ಲಿ 2 ನೇ ವಿಕೆಟ್ ಗೆ 91 ರನ್ ಕಲೆ ಹಾಕಿದರು. ದೇವದತ್ತ ಪೆಡಿಕಲ್ ಕೂಡ ಬಿರುಸಿನ ಆಟಕ್ಕೆ ಇಳಿದು 22 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ನಂತರ ಕೊಹ್ಲಿ ಹಾಗೂ ನಾಯಕ ರಜತ್ ಪಟಿದಾರ 48 ರನ್ ಗಳ ಉಪಯುಕ್ತ ಪಾಲುಗಾರಿಕೆ ತಂದರು. ಏತನ್ಮಧ್ಯೆ ನಾಯಕ ರಜತ್ ಪಟಿದಾರ ಕೂಡ ಬಿರುಸಿನ ಆಟಕ್ಕೆ ಇಳಿದಿದ್ದರಿಂದ ಅವರು ಕೇವಲ 25 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದರು.
ಪಂದ್ಯ ಶ್ರೇಷ್ಠ: ರಜತ್ ಪಟಿದಾರ