ಚಾಮರಾಜನಗರ: –ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿರುವ ವಿಚಾರವಾಗಿ ನಗರಸಭಾ ಸದಸ್ಯ ಹಾಗೂ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಕ್ರಮ ಪರಭಾರೆ ಪ್ರಕರಣದಡಿ 4 ಜನ ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದು, ಸಂಘದ ಆಸ್ತಿ ಸಂರಕ್ಷಣೆಗಾಗಿ ಮುಂಚೂಣಿ ಹೋರಾಟಗಾರನಾಗಿದ್ದ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಸಹೋದರ ಜಯರಾಮ್ ಕೂಡ ಒಬ್ಬರು ಎಂಬುದು ಬೆಳಕಿಗೆ ಬಂದಿದೆ.
ಮೈಸೂರು ಮೂಲದ ಸೋಮಸುಂದರ್, ರಾಮಸಮುದ್ರ ಬಡಾವಣೆಯ ಜಯರಾಮ್ ಬಂಧಿತರು. ಈ ಪ್ರಕರಣದಲ್ಲಿ ಒಟ್ಟು 14 ಜನ ಆರೋಪಿಗಳಿದ್ದು, 3ನೇ ಆರೋಪಿ ಸಿ.ಎಸ್.ಗೋವಿಂದರಾಜು ಅವರನ್ನು ಪೊಲೀಸರು ಮೊದಲು ಬಂಧಿಸಿದರು. ಭಾನುವಾರ ಕುದೇರು ಹರೀಶ್‌ನನ್ನು ಬಂಧಿಸಲಾಗಿತ್ತು.
ಈತನ ವಿಚಾರಣೆ ವೇಳೆ ಪ್ರಕರಣದ 5ನೇ ಆರೋಪಿ ಎಚ್.ಕೆ.ಶರ್ಮ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಈ ಹೆಸರಿನ ವ್ಯಕ್ತಿಯೇ ಇಲ್ಲ ಎಂಬುದು ತಿಳಿದುಬಂದಿದೆ. ಮೈಸೂರಿನ ಸೋಮಸುಂದರ್ ಎಂಬುವವರೇ ಎಚ್.ಕೆ.ಶರ್ಮ ಎಂಬ ನಕಲಿ ಹೆಸರಿನಲ್ಲಿ ಸಂಘದ ಆಸ್ತಿ ಖರೀದಿ ಮಾಡಿದ್ದಾನೆ. ಈತನನ್ನು ಹರೀಶ್‌ಗೆ ಪರಿಚಯಿಸಿರುವುದು ಜಯರಾಮ್ ಎಂದು ಗೊತ್ತಾಗಿದೆ. ಈ ಇಬ್ಬರು ಆರೋಪಿಗಳನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೋರಾಟ ಸಮಿತಿ ಸದಸ್ಯನ ಸಹೋದರನು ಆರೋಪಿ:ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿವಾದ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಆರೋಪಿ ಜಯರಾಮ್ ಆಸ್ತಿ ಸಂರಕ್ಷಣಾ ಸಮಿತಿ ಮುಂಚೂಣಿ ಹೋರಾಟಗಾರ, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಸಹೋದರರಾಗಿದ್ದಾರೆ.
ಮೈಸೂರಿನ ಸೋಮಸುಂದರ್ ಅವರನ್ನು ಹರೀಶ್ ಅವರಿಗೆ ಪರಿಚಯ ಮಾಡಿಕೊಟ್ಟಿರುವುದೇ ಜಯರಾಮ್ ಎಂಬುದು ತಿಳಿದು ಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಆಸ್ತಿಗಳನ್ನು ಪರಭಾರೆ ಮಾಡುವಲ್ಲಿ ಇವರು ಹಿಂದಿನಿಂದಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿದರೆ ಸತ್ಯಾಸತ್ಯತೆಗಳು ಹೊರ ಬರಲಿದೆ..
ವರದಿ : ಸ್ವಾಮಿ ಬಳೇಪೇಟೆ