ಬೆಂಗಳೂರು : “ಕಬ್ಬು ಬೆಳೆಗಾರರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ, ಇದೇ ವರ್ತನೆ ಮುಂದುವರಿದರೆ ರೈತರ ಹೋರಾಟದ ಕಿಚ್ಚು ಸರ್ಕಾರವನ್ನೇ ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎಂಟು ದಿನಗಳಿಂದ ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟ ಹಾಗೂ ಇತರೆ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಚಳವಳಿ ಇತರೆ ಜಿಲ್ಲೆಗಳಿಗೂ ಹರಡುತ್ತಿದೆ.
ಅನೇಕ ಮಠಗಳ ಧರ್ಮಗುರುಗಳು ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಆದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಇಲ್ಲದಿರುವುದು ದುರದೃಷ್ಟಕರ ಎಂದು ಪತ್ರಿಕಾ ಹೇಳಿಕೆಯಲ್ಲಿ ಹರಿಹಾಯ್ದಿದ್ದಾರೆ.
ರೈತರನ್ನು ಬೀದಿಯಲ್ಲಿ ಕೂರಿಸಿರುವ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಮಾತುಕತೆ ನಡೆಸಬೇಕು ಎಂಬ ನಾಟಕ ಆಡುತ್ತಿದೆ. ಮುಂಚಿತವಾಗಿ ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಜತೆ ಸಮಾಲೋಚಿಸಿ ಬೆಲೆ ನಿಗದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು? ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಆಗ ಏನು ಮಾಡುತ್ತಿದ್ದರು? ರಾಜ್ಯ ಸರ್ಕಾರ ಉದಾರವಾಗಿ ನಡೆದುಕೊಂಡು ಬೊಕ್ಕಸದಿಂದ ನೆರವು ನೀಡಲು ಇರುವ ತೊಂದರೆ ಏನು? ಪ್ರತಿ ಟನ್ ಗೆ 500 ರೂ. ಸಹಾಯಧನ ನೀಡಲಿ ಎಂದು ಆಗ್ರಹಿಸಿದ್ದಾರೆ.




