ಬೆಂಗಳೂರು: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅನ್ನು ತಾಲಿಬಾನ್ ಗೆ ಹೋಲಿಕೆ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರ್ಎಸ್ಎಸ್ ಅನ್ನು ಹೊಗಳಿದ್ದರು.
ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ದೇಶದಲ್ಲಿ ಶಾಂತಿ ಕದಡಲು ಆರ್ಎಸ್ಎಸ್ ನವರು ಪ್ರಯತ್ನಿಸುತ್ತಿದ್ದಾರೆ.
ಹೀಗಾಗಿ ನಾನು ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಸುತ್ತೇನೆ. ಭಾರತೀಯ ತಾಲಿಬಾನ್ಗಳಾಗಿರುವ ಆರ್ಎಸ್ಎಸ್ ನವರನ್ನು ಪ್ರಧಾನಿಯವರು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆರ್ ಎಸ್ಎಸ್ ಅನ್ನು ಇಡೀ ದೇಶದಲ್ಲಿ ದೊಡ್ಡ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ಅದು ನೊಂದಣಿ ಆಗಿರುವ ಸಂಘಟನೆ ಅಲ್ಲ. ಅವರಿಗೆ ಹಣ ಎಲ್ಲಿಂದ ಬರುತ್ತೆ..?. ಕಳೆದ 52 ವರ್ಷಗಳಿಂದ ಆರ್ ಎಸ್ಎಸ್ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.
ಮೊಹಮ್ಮದ್ ಅಲಿ ಜಿನ್ನಾ, ಕಾಂಗ್ರೆಸ್ ಮತ್ತು ಆಗಿನ ವೈಸ್ರಾಯ್ ಲಾರ್ಡ್ ಮೌಂಟ್ಬ್ಯಾಟನ್ ಅವರು ದೇಶ ವಿಭಜನೆಗೆ ಕಾರಣ ಎಂದು ಎನ್ಸಿಇಆರ್ಟಿ ಪಠ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರ್ ಎಸ್ಎಸ್ ಹಾಗೂ ಬಿಜೆಪಿಯವರು ಇತಿಹಾಸವನ್ನು ತಿರುಚುವುದರಲ್ಲಿ ಪ್ರವೀಣರು.
ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರನ್ನು ಹೇಳುವುದನ್ನು ಬಿಟ್ಟು ಓಲೈಕೆಗಾಗಿ ಮೋದಿಯವರು ಆರ್ ಎಸ್ಎಸ್ ಅನ್ನು ಕೆಂಪುಕೋಟೆಯಲ್ಲಿ ನಿಂತು ಹೊಗಳಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಜ್ಲುಲ್ ಹಕ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿಯವರು ವಿಭಜನೆಗಾಗಿ ಬಂಗಾಳದಲ್ಲಿ ಮೊದಲ ನಿರ್ಣಯವನ್ನು ಮಂಡಿಸಿದವರಾಗಿದ್ದಾರೆ.
ಜಿನ್ನಾ ಮತ್ತು ಸಾವರ್ಕರ್ ಎರಡೂ ಧರ್ಮಗಳಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಅಭಿಪ್ರಾಯಪಟ್ಟರು. ಆದರೆ ಅದಕ್ಕೆ ಕಾಂಗ್ರೆಸ್ ಅನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಗುಡುಗಿದರು.
ಮೋದಿ ಭಾಷಣಕ್ಕೆ ಸಿದ್ದರಾಮಯ್ಯ ಟೀಕೆ: ಮೋದಿ ಅವರು ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಆರ್ ಎಸ್ ಎಸ್ ಅನ್ನು ಹಾಡಿ ಹೊಗಳಿರುವುದು ಸ್ವಾತಂತ್ರ್ಯಹೋರಾಟ, ರಾಷ್ಟ್ರಧ್ವಜ ಮತ್ತು ಸಂವಿಧಾನದ ನಿಜ ಆಶಯಗಳಿಗೆ ಮಾಡಿರುವ ಅವಮಾನ. ಸ್ವಾತಂತ್ರ್ಯಹೋರಾಟದಲ್ಲಿ ಎಂದೂ ಭಾಗವಹಿಸದೆ ಇದ್ದ ಮತ್ತು ಇತ್ತೀಚಿನವರೆಗೆ ನಮ್ಮ ಹೆಮ್ಮೆಯ ತ್ರಿವರ್ಣ ರಾಷ್ಟ್ರಧ್ವಜವನ್ನು ತಮ್ಮ ಕಚೇರಿಯಲ್ಲಿ ಆರೋಹಣ ಮಾಡಲು ನಿರಾಕರಿಸಿದ್ದ ಆರ್ ಎಸ್ ಎಸ್ ಗೆ ಅಭಿನಂದನೆ ಸಲ್ಲಿಸುವ ಮೂಲಕ ಸ್ವಾತಂತ್ರೋತ್ಸವ ದಿನಾಚರಣೆಯ ಪವಿತ್ರವಾದ ವೇದಿಕೆಯನ್ನು ನರೇಂದ್ರ ಮೋದಿ ಅವರು ತಮ್ಮ ಸ್ಥಾನದ ಮೂಲಕ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಮ್ಮ ಸ್ವತಂತ್ರ ಭಾರತದಲ್ಲಿ ಬಿಜೆಪಿ ಸೇರಿದಂತೆ ಯಾವ ಪಕ್ಷಗಳ ಪ್ರಧಾನ ಮಂತ್ರಿಯವರೂ ಈ ರೀತಿ ಸ್ವಾತಂತ್ರೋತ್ಸವದ ವೇದಿಕೆಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿಲ್ಲ.
ನರೇಂದ್ರ ಮೋದಿಯವರು ದೇಶದ ಜನ ಗೌರವಿಸುವ ಈ ವೇದಿಕೆಯ ಘನತೆ-ಗೌರವಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಆರ್.ಎಸ್.ಎಸ್ ನಾಯಕರು ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆಗಳೇ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.




