ನವದೆಹಲಿ: ಭಾರತೀಯ ಕರೆನ್ಸಿ ಇತಿಹಾಸದಲ್ಲಿ ಇಂದು ಕಪ್ಪು ಚುಕ್ಕೆ ಇದೇ ಮೊದಲ ಬಾರಿಗೆ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 95.21 ಕ್ಕೆ ಕುಸಿಯುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಸೋಮವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ರೂಪಾಯಿ ಮೌಲ್ಯವು ತೀವ್ರ ಕುಸಿತ ಕಂಡು ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದೆ.
ಯಾಕೀ ಕುಸಿತ? ಇಲ್ಲಿವೆ 3 ಮುಖ್ಯ ಕಾರಣಗಳು:
ಯುದ್ಧದ ಕಿಚ್ಚು: ಪಶ್ಚಿಮ ಏಷ್ಯಾದಲ್ಲಿ (West Asia) ಉಲ್ಬಣಗೊಂಡಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದಾಗಿ ಹೂಡಿಕೆದಾರರು ರೂಪಾಯಿಯಂತಹ ಕರೆನ್ಸಿಗಳಿಗಿಂತ ಡಾಲರ್ ಮೇಲೆಯೇ ಹೆಚ್ಚು ನಂಬಿಕೆ ಇಡುತ್ತಿದ್ದಾರೆ.
ತೈಲ ಬೆಲೆ ಏರಿಕೆ: ಕಚ್ಚಾ ತೈಲ (Brent Crude) ಬೆಲೆ ಬ್ಯಾರೆಲ್ಗೆ $116 ಕ್ಕೆ ಏರಿಕೆಯಾಗಿದೆ. ಭಾರತವು ಶೇ. 85 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಆಮದು ಬಿಲ್ ಪಾವತಿಸಲು ಡಾಲರ್ಗೆ ಭಾರಿ ಬೇಡಿಕೆ ಬಂದಿದೆ.
ಷೇರು ಮಾರುಕಟ್ಟೆ ಕ್ರಾಶ್: ವಿದೇಶಿ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಸುಮಾರು ₹4,367 ಕೋಟಿ ಹಣವನ್ನು ವಾಪಸ್ ಪಡೆದಿದ್ದಾರೆ. ಇಂದು ಸೆನ್ಸೆಕ್ಸ್ 1,635 ಪಾಯಿಂಟ್ಸ್ ಹಾಗೂ ನಿಫ್ಟಿ 488 ಪಾಯಿಂಟ್ಸ್ ಕುಸಿದು ಹೂಡಿಕೆದಾರರಿಗೆ ಭಾರಿ ನಷ್ಟ ಉಂಟುಮಾಡಿದೆ.
ಆರ್ಬಿಐ (RBI) ಮೌನವೇ? ರೂಪಾಯಿ ಕುಸಿತ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆಯಾದರೂ, ಜಾಗತಿಕ ಮಾರುಕಟ್ಟೆಯ ಒತ್ತಡದ ಮುಂದೆ ಇವು ತಾತ್ಕಾಲಿಕವಾಗಿ ಮಾತ್ರ ಕೆಲಸ ಮಾಡುತ್ತಿವೆ. ತಜ್ಞರ ಪ್ರಕಾರ, ಯುದ್ಧದ ಪರಿಸ್ಥಿತಿ ತಿಳಿಯಾಗದ ಹೊರತು ರೂಪಾಯಿ ಚೇತರಿಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ.
ಸಾಮಾನ್ಯ ಜನರ ಮೇಲೇನು ಎಫೆಕ್ಟ್? ರೂಪಾಯಿ ಮೌಲ್ಯ ಕುಸಿದರೆ ನೀವು ವಿದೇಶದಿಂದ ಆಮದು ಮಾಡಿಕೊಳ್ಳುವ ಮೊಬೈಲ್, ಲ್ಯಾಪ್ಟಾಪ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗಲಿವೆ. ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ.




