ಸದಲಗಾ ಕುವೆಂಪು ಶತಮಾನೋತ್ಸವ ಶಾಲೆಯ ದುಸ್ಥಿತಿ!! ಪಂಚ ಯೋಜನೆಗಳು ಪೂರ್ಣಗೊಂಡರು ಪ್ರಚಾರ ವೇಳೆ ಕೆಡವಿದ ಗೋಡೆ ಇನ್ನೂ ಅಪೂರ್ಣ!!.
ಚಿಕ್ಕೋಡಿ : ಮೇ 5 – 2023 ರಂದು ಕರ್ನಾಟಕ ವಿಧಾನಸಭೆಯ ಚುನಾವಣೆ ಪ್ರಚಾರ ವೇಳೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಕುವೆಂಪು ಮಾದರಿ ಶಾಲೆಯ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಪರ ರಾಹುಲ ಗಾಂಧಿಯವರು ಆಗಮಿಸಿದ್ದರು. ಇದೇ ವೇಳೆಗೆ ಸದರಿ ಶಾಲೆಗೆ ಪ್ರವೇಶಿಸಲು ತೊಂದರೆಯಾಗುತ್ತಿರುವುದರಿಂದ ಸದರಿ ಶಾಲೆಯ ಪ್ರವೇಶ ದ್ವಾರದ ಬಳಿ ಇರುವ ಅಂತರರಾಜ್ಯ ರಸ್ತೆಗೆ ಹೊಂದಿಕೊಂಡಿರುವ ಶಾಲೆಯ ಸಂರಕ್ಷಣೆ ಗೋಡೆಯ ಸುಮಾರು ಒಂದೂವರೆ ಅಡಿ ಅಗಲ ಹಾಗೂ 17 ಅಡಿ ಉದ್ದ ಅಳತೆಯ ಸಂರಕ್ಷಣೆ ಗೋಡೆಯನ್ನು ಕೆಡವಿ ಪ್ರವೇಶ ಕಲ್ಪಿಸಲಾಯಿತು. ಆದರೆ ಸಂರಕ್ಷಣೆ ಗೋಡೆ ಕೆಡವಿ ಒಂದೂವರೆ ವರ್ಷ ಕಳೆದರೂ ಇನ್ನೂ ಗೋಡೆ ಕಟ್ಟುವ ಭಾಗ್ಯ ಕೂಡಿ ಬಂದಿಲ್ಲ. ವಿಧಾನಸಭೆ ಚುನಾವಣೆ ಮುಗಿಯಿತು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂತು, ಐದು ಯೋಜನೆಗಳು ಜಾರಿಗೆ ಬಂದವು. ಆದರೇ……..ಈ ಐದು ಯೋಜನೆಗಳ ಸಂಕಲ್ಪ ಹೊತ್ತು ಮತದಾರರಿಗೆ ಅರಿವು ಮೂಡಿಸಲು ಕೈಗೊಂಡ ರಾಹುಲ ಗಾಂಧಿಯವರ ಪ್ರಚಾರಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಕೆಡವಿದ ಶತಮಾನೋತ್ಸವ ಶಾಲೆಯ ಆವರಣಗೋಡೆ ಮಾತ್ರ ಇನ್ನೂ ಕಟ್ಟದೇ ಅಪೂರ್ಣವಾಗಿಯೇ ಉಳಿದಿದೆ. ಅಷ್ಟೇ ಅಲ್ಲ ಸದರಿ ಸ್ಥಳದಲ್ಲಿ ತ್ಯಾಜ್ಯ ವಸ್ತು ಸಾರಾಯಿ ಬಾಟಲಿಗಳ ರಾಶಿಯಿಂದಾಗಿ ಕಸದ ಗುಂಡಿಯಾಗಿದೆ. ಕುವೆಂಪು ಶಾಲೆಯ ಸಂಕುಲದಲ್ಲಿ ಸದ್ಯ ಶತಮಾನೋತ್ಸವ ಕನ್ನಡ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸರಕಾರಿ ಉರ್ದು ಪ್ರಾಥಮಿಕ ಶಾಲೆ, ಮೌಲಾನಾ ಅಬ್ದುಲ್ ಕಲಾಂ ಉರ್ದು ಪ್ರೌಢಶಾಲೆ, ಪದವಿ ಪೂರ್ವ, ಪದವಿ ಮಹಾವಿದ್ಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ 8೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದು ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎನ್ನುವ ಪ್ರವೇಶ ದ್ವಾರದಲ್ಲಿ ಕೆಡವಿದ ಗೋಡೆ ಕಟ್ಟದೇ ಇರುವುದು ಸಾರ್ವಜನಿಕರ, ಪಾಲಕರ ಕೆಂಗಣ್ಣಿಗೆ ಗುರಿಯಾಗಿದೆ.
ಮಹಾವೀರ ಚಿಂಚನೆ