ಸಿರುಗುಪ್ಪ : ಮಹಾ ಶಿವರಾತ್ರಿ ನಿಮಿತ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವತಿಯಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ನಡೆದ ಸದ್ಭಾವನಾ ಶಾಂತಿ ಯಾತ್ರೆ ಹಾಗೂ ಶಿವಲಿಂಗಗಳ ಮೆರವಣಿಗೆ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾಧ್ಯಕ್ಷ ಟಿ.ಹುಚ್ಚೀರಪ್ಪ ಅವರು ಚಾಲನೆ ನೀಡಿದರು.
ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಪೂರ್ಣಿಮಾ ಅಕ್ಕನವರು ಮಾತನಾಡಿ ಮಹಾಶಿವರಾತ್ರಿಯ ನಿಮಿತ್ತ ಜಗದೇಕ ಒಡೆಯನಾಗಿರುವಂತಹ, ಇಡೀ ವಿಶ್ವದ ಎಲ್ಲಾ ಆತ್ಮಗಳಿಗೆ ಏಕೈಕ ತಂದೆಯಾಗಿರುವ ಪರಮಾತ್ಮನನ್ನ ಏಕೇಶ್ವರ, ಲೋಕೇಶ್ವರ, ಪರಮೇಶ್ವರ ಹೀಗೆ ಸಾವಿರಾರು ಹೆಸರುಗಳ ಮೂಲಕ ಕರೆಸಿಕೊಳ್ಳುವ ಶಿವನ ಅವತರಣಿಕೆಯ ದಿನ ಮಹಾಶಿವರಾತ್ರಿ ಆಗಿದೆ.

ಅದರ ಹಿಂದಿನವಾದ ಮಂಗಳವಾರ ಶಿವಲಿಂಗಗಳ ಮೆರವಣಿಗೆ ಮತ್ತು ಶಾಂತಿ ಸದ್ಭಾವನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಗತ್ತಿನಲ್ಲಿಂದು ಅಜ್ಞಾನವೆಂಬ ಕತ್ತಲು ಆವರಿಸಿಕೊಂಡಿದೆ.
ಆದ್ದರಿಂದ ಭಯ, ಅಶಾಂತಿಯನ್ನ ಆ ಪರಮಾತ್ಮನು ನಿವಾರಿಸಿ ಲೋಕ ಕಲ್ಯಾಣವನ್ನುಂಟು ಮಾಡಲೆಂದು ಈಶ್ವರಿ ವಿದ್ಯಾಲಯದ ಪರಿವಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆಂದು ತಿಳಿಸಿದರು.
ಕೋಲಾಟ, ವಿವಿಧ ವಾದ್ಯಗಳೊಂದಿಗೆ ನಗರದ ರಾಜಬೀದಿಯಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ, ಶ್ರೀ ಭೀಮಾಶಂಕರ, ರಾಮೇಶ್ವರ, ವೈದ್ಯನಾಥ, ತ್ರಯಂಬಕೇಶ್ವರ, ಓಂಕಾರೇಶ್ವರ, ಕೇದಾರೇಶ್ವರ, ನಾಗೇಶ್ವರ, ಗೌರಿಶಂಕರ ಮಹಾ ಕಾಳೇಶ್ವರರ ಶಿವಲಿಂಗಗಳ ಮಾದರಿಯನ್ನು ಕಾರುಗಳ ಮೇಲೆ ದರ್ಶನಕ್ಕೆ ಇಡಲಾಗಿತ್ತು.
ಸುಮಂಗಲೆಯರು ಕಳಸವನ್ನು ಹೊತ್ತು ನಡೆದರು. ಶಿವ, ಕೃಷ್ಣ, ಇನ್ನಿತರ ವೇಷಧಾರಿ ಮಕ್ಕಳು ನೋಡುಗರ ಗಮನ ಸೆಳೆದರು.
ಓಂ ಶಾಂತಿಯ ಆರಾಧಕರು ಪರಮಾತ್ಮನ ಅವತಾರಗಳ ಸಂದೇಶದ ಬಿತ್ತಿಪತ್ರಗಳನ್ನು ಹಂಚುತ್ತಾ ಮುಂದೆ ಸಾಗಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಡೆದ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಜರುಗಿ ಈಶ್ವರಿ ವಿಶ್ವವಿದ್ಯಾಲಯದ ಕಛೇರಿಯಲ್ಲಿ ಸಮಾಪ್ತಿಗೊಂಡಿತು.
ಇದೇ ವೇಳೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಎಮ್.ಚಂದ್ರಕಾಂತ್, ಶಿವಕುಮಾರ ಈಶ್ವರಿ ವಿಶ್ವವಿದ್ಯಾಲಯದ ಮಾಲಮ್ಮ ಅಕ್ಕ, ಮುಖಂಡರಾದ ಹೆಡಗಿನಾಳ್ ವೆಂಕಟೇಶ ನಾಯಕ, ಪಿ.ಬಿ.ರವಿ, ಟಿ.ತಿಮ್ಮಯ್ಯಶೆಟ್ಟಿ, ಟಿ.ಇ.ಮಂಜುನಾಥ ಹಾಗೂ ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




