ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರದ ‘ಸಿಕಂದರ್ ನಾಚೆ’ ಹಾಡು ಅನಾವರಣಗೊಂಡಿದೆ. ಟೈಟಲ್ ಟ್ರ್ಯಾಕ್ ಇಂದು ಬಿಡುಗಡೆಯಾಗಿದ್ದು, ಜೋಡಿಯ ಅದ್ಭುತ ಕೆಮಿಸ್ಟ್ರಿಗೆ ಅಭಿಮಾನಿಗಳು ಪ್ರಶಂಸೆಯ ಮಳೆಯನ್ನೇ ಹರಿಸಿದ್ದಾರೆ. ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾ ಇದೇ ಮಾರ್ಚ್ 28ರಂದು ಚಿತ್ರಮಂದಿರ ಪ್ರವೇಶಿಸಲಿದೆ.
‘ಸಿಕಂದರ್ ನಾಚೆ’ ಟ್ರ್ಯಾಕ್ನಲ್ಲಿ, ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬ್ಲ್ಯಾಕ್ ಔಟ್ಫಿಟ್ನಲ್ಲಿ ಸ್ಟನ್ನಿಂಗ್ ಎಂಟ್ರಿ ಕೊಟ್ಟಿದ್ದಾರೆ. ಅವರ ಜೊತೆ ಟಾಲಿವುಡ್, ಬಾಲಿವುಡ್ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಗೋಲ್ಡನ್ ಅಂಡ್ ವೈಟ್ ಔಟ್ಫಿಟ್ ಧರಿಸಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ಇಬ್ಬರ ಎಂಟ್ರಿ ನೋಡುಗರ ಗಮನ ಸೆಳೆದಿದ್ದು, ಜೋಡಿಯ ಕೆಮಿಸ್ಟ್ರಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ, ಈ ಹಾಡು ಪವರ್ – ಪ್ಯಾಕ್ಡ್ ಕೊರಿಯೋಗ್ರಾಫಿಯೊಂದಿಗೆ ಬಂದಿದ್ದು, ಡ್ಯಾನ್ಸ್ ಪ್ರಿಯರಿಗೆ ಹೆಚ್ಚು ಹಿಡಿಸುವ ಭರವಸೆಯಿದೆ. ಅಹ್ಮದ್ ಖಾನ್ ಅವರ ನೃತ್ಯ ಸಂಯೋಜನೆಯಿದೆ.
ಈ ಹಾಡಿನಲ್ಲಿ ಸಲ್ಮಾನ್ ಖಾನ್ ಅವರ ಟ್ರೇಡ್ಮಾರ್ಕ್ ಮೂವ್ಸ್ ಕಾಣಬಹುದು. ಜೊತೆಗೆ, ಅದ್ದೂರಿ ಸೆಟ್ಸ್ ಮತ್ತು ಕಾಸ್ಟ್ಯೂಮ್ಸ್ ನೋಡುಗರ ಗಮನ ಸೆಳೆದಿದೆ. ಸುಮಾರು ಒಂದು ದಶಕದ ಗ್ಯಾಪ್ ಬಳಿಕ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಮತ್ತು ನೃತ್ಯ ಸಂಯೋಜಕ ಅಹ್ಮದ್ ಖಾನ್ ಅವರೊಂದಿಗೆ ಸಲ್ಮಾನ್ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಮೂವರು ಕೊನೆಯ ಬಾರಿಗೆ ಕಿಕ್ ಚಿತ್ರದ ಬ್ಲಾಕ್‌ಬಸ್ಟರ್ ಜುಮ್ಮೆ ಕಿ ರಾತ್ ಹಾಡಿನಲ್ಲಿ ಕೆಲಸ ಮಾಡಿದ್ದರು.
2025ರ ಹೋಳಿ ಹಬ್ಬದ ಸಂದರ್ಭ ಬಿಡುಗಡೆ ಆದ ಬಮ್ ಬಮ್ ಭೋಲೆ ಮತ್ತು ಅದಕ್ಕೂ ಮುನ್ನ ಅನಾವರಣಗೊಂಡ ಜೋಹ್ರಾ ಜಬೀನ್ ಪ್ರೇಕ್ಷಕರನ್ನು ತಲುಪಿತ್ತು. ‘ಸಿಕಂದರ್ ನಾಚೆ’ ಚಿತ್ರದ 3ನೇ ಹಾಡು. ತಮ್ಮ ಗಾಯದ ಹೊರತಾಗಿಯೂ ಸಲ್ಮಾನ್ ಖಾನ್ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಟ ಪೂರ್ಣ ಪ್ರಮಾಣದ ಎಫರ್ಟ್ ಹಾಕಿದ್ದು, ಸಾಂಗ್ ಸಖತ್ ಎನರ್ಜಿಟಿಕ್ ಆಗಿ ಮೂಡಿಬಂದಿದೆ.
ಸಿಕಂದರ್, ಎಆರ್ ಮುರುಗದಾಸ್ ನಿರ್ದೇಶನದ ಹೈ-ಆ್ಯಕ್ಷನ್ ರೊಮ್ಯಾಂಟಿಕ್ ಸಿನಿಮಾ. ಮುಂಬೈ ಹಾಗೂ ಹೈದರಾಬಾದ್‌ನ ಅನೇಕ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಇತ್ತೀಚಿನ ಛಾವಾ ಚಿತ್ರದ ಯಶಸ್ಸಿನಲೆಯಲ್ಲಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಮತ್ತೊಂದು ಹಿಟ್ ಸಿಗುವ ಭರವಸೆ ಇದೆ.