ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೋಥಳಿಯ ಸಮಾಧಿಸೇನ ಮುನಿಗಳು ಜೈನ ಸಂಪ್ರದಾಯದಂತೆ ಯಮ ಸಲ್ಲೇಖನ ವೃತ ಸ್ವೀಕರಿಸಿ ಜಿನೈಕ್ಯರಾಗಿದ್ದಾರೆ.
ಕೋಥಳಿಯ ದೇಶಭೂಷಣ ಮನಿಗಳ ಜೈನ ಆಶ್ರಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸಲ್ಲೇಖನ ವೃತ ನಿರತರಾಗಿದ್ದರು. ಸೋಮವಾರ ರಾತ್ರಿ ಅವರು ಜಿನೈಕ್ಕರಾಗಿದ್ದಾರೆ.
ಸಮಾಧಿಸೇನ ಮುನಿಗಳಿಗೆ 79 ವರ್ಷ ವಯಸ್ಸಾಗಿತ್ತು. ಮೇ7ರಿಂದ ಅವರು ಆಹಾರ ತ್ಯಾಗ ಮಾಡಿದ್ದರು. ಆಶ್ರಮದ ಆವರಣದಲ್ಲಿಯೇ ಮಂಗಳವಾರ ಅಂತ್ಯಕ್ರಿಯ ನೆರವೇರಿದೆ. ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕು, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಜಿಲ್ಲೆಯಿಂದಲೂ ಅಪಾರ ಸಂಖ್ಯೆಯ ಭಕ್ತರು ಆಶ್ರಮಕ್ಕೆ ಬಂದು ಮುನಿಗಳ ಅಂತಿಮ ದರ್ಶನ ಪಡೆದರು.
ಗದಗ ಜಿಲ್ಲೆಯ ಗಜೇಂದ್ರಗಢದವರಾದ ಸಮಾಧಿಸೇನ ಮುನಿಗಳು ಗುಲಾಬಭೂಷಣ ಮುನಿಯವರ ಶೀಷ್ಯರಾಗಿದ್ದರು. ಸಂಸಾರಿಯಾಗಿದ್ದ ಅವರು. 2004ರಲ್ಲಿ ಮನೆ ತೊರೆದು ಜಿನದೀಕ್ಷೆ ಪಡೆದು ಜೈನ ಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದ್ದರು. 2014ರಲ್ಲಿ ಮಹಾರಾಷ್ಟ್ರದ ಚಿಪರಿ. ಆಶ್ರಮದ ಧರ್ಮಸೇನಾ ಮುನಿಗಳಿಂದ ಕ್ಷುಲ್ಲಕ ದೀಕ್ಷೆ ಪಡೆದಿದ್ದರು. 2021ರಲ್ಲಿ ಗುಲಾಬಭೂಷಣ ಮುನಿಗಳಿಂದ ಮುನಿ ದೀಕ್ಷೆ ಪಡೆದಿದ್ದರು.
ಕೋಥಳಿಯ ಆಶ್ರಮದಲ್ಲಿ ದೇಶಭೂಷಣ ಮುನಿಗಳು ಸೇರಿ ಇದುವರೆಗೆ 40ಕ್ಕೂ ಅಧಿಕ ಜೈನಮುನಿಗಳು ಯಮ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ್ದಾರೆ. ಸಲ್ಲೇಖನ ಎಂದರೆ, ಮೋಕ್ಷಕ್ಕಾಗಿ ಆಹಾರ ನೀರು ತ್ಯಜಿಸಿ ಕಠಿಣ ವೃದದಿಂದ ದೇಹ ತ್ಯಾಗ ಮಾಡುವುದಾಗಿದೆ. ಸಲ್ಲೇಖನ ವ್ರತವು ಮುನಿಗೆ ಶ್ರೇಷ್ಠವಾದುದು ಹಾಗೂ ಗೃಹಸ್ಥರಿಗೆ ಸಂಪೂರ್ಣ ಐಚ್ಛಿಕ ಕ್ರಿಯೆಯಾಗಿದೆ.