ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬರ್ 31 ರೊಳಗೆ ಬೆಳಗಾವಿ ಜಿಲ್ಲೆಯ ವಿಭಜನೆ ಮಾಡಿ ಹೊಸ ಜಿಲ್ಲೆಗಳ ಘೋಷಣೆ ಮಾಡಬೇಕು ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ ಒತ್ತಾಯ ಮಾಡಿದ್ದಾರೆ.
ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಮುಂದಿನ ವರ್ಷ ಏಪ್ರಿಲ್ ದಿಂದ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಮನೆಗಳ ಮತ್ತು ಜನವಸತಿ ಪ್ರದೇಶದ ಸಮೀಕ್ಷೆ ನಡೆಯಲಿದೆ.
ನಂತರ 2027 ರ ಫೆಬ್ರವರಿ ಯಿಂದ ಜನಗಣತಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಬದಲಾವಣೆ ಮಾಡುವದಿದ್ದರೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಜನಗಣತಿ ಇಲಾಖೆ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳಿಸಿದೆ.]

ಆದ್ದರಿಂದ ಸರಕಾರ ಈ ವರ್ಷದ ಅಂತ್ಯದೊಳಗೆ ಹೊಸ ಜಿಲ್ಲೆಗಳ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ವಿಭಜನೆ ಆಗುವುದಿಲ್ಲ ಎಂದರು.
ಬಳಿಕ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದೇವೆ.ಆದ್ರೂ ಕೂಡಾ ಜಿಲ್ಲೆಯ ಕನಸು ನನಸು ಆಗುತ್ತಿಲ್ಲ.ಸರ್ಕಾರ ಆಡಳಿತಾತ್ಮಕ ದೃಷ್ಟಿಯಿಂದ ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕು ಎಂದರು.
ಈ ಸಂಧರ್ಭದಲ್ಲಿ ರಫೀಕ ಪಠಾಣ,ಸಂಜು ಹಿರೇಮಠ, ಮೋಹನ ಪಾಟೀಲ, ಸಚಿನ ದೊಡ್ಡಮನಿ,ಚನ್ನಪ್ಪ ಬಡಿಗೇರ, ಅನೀಲ ನಾವಿಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




