ಸೇಡಂ: ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಮೂಲಕ ಸ್ಥಾಪಿಸಿರುವ ಸತ್ಯ ಯುಗಕ್ಕೆ ಅಡಿಗಲ್ಲಿನ ಸಾಧಕ “ಫೌಂಡೇಷನ್ ಪಿಲ್ಲರ್ ಆಫ್ ಸತ್ಯ ಯುಗ” ಪ್ರಶಸ್ತಿಗೆ ಶ್ರೀ ಸಂತೋಷಕುಮಾರ ತೋಟ್ನಳ್ಳಿ ಯವರನ್ನು ಟ್ರಸ್ಟ್ ಮೂಲಕ ಆಯ್ಕೆ ಮಾಡಲಾಗಿದೆ.
ಟ್ರಸ್ಟ್ ನ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ತಿಳಿಸಲಾಯಿತು. ಹಾಗೂ ಅವರಿಂದ ಸಮ್ಮತಿ ಪಡೆದು ಅವರಿಗೆ ಟ್ರಸ್ಟ್ ನ ಪ್ರಶಸ್ತಿಯ ಆಯ್ಕೆ ಪ್ರಮಾಣಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ ಗೋಣಗಿ, ವಿಜಯಕುಮಾರ ಕಟ್ಟಿಮನಿ, ಜನಾರ್ದನ ರೆಡ್ಡಿ ತುಳೇರ, ಆಕಾಶ ಭಾಗೋಡಿ, ಭೀಮಾಶಂಕರ ಗುಂಡಗುರ್ತಿ ಇದ್ದರು.
“ಪ್ರಶಸ್ತಿ ಪುರಸ್ಕೃತರ ಪರಿಚಯ.” ಶ್ರೀಯುತ ಸಂತೋಷಕುಮಾರ ತೋಟ್ನಳ್ಳಿ ಯವರು ಹತ್ತನೇ ತರಗತಿ ವರೆಗೂ ಸೇಡಂ ನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಓದಿ ಮುಂದೆ ಇಂಜಿನಿಯರಿಂಗ್ ಶಿಕ್ಷಣವನ್ನು ಗುಲ್ಬರ್ಗಾ ದ ಪಿ.ಡಿ.ಎ ಕಾಲೇಜ್ ನಲ್ಲಿ ಡಿಸ್ಟಿಂಕ್ಷನ್ ನಲ್ಲಿ ಮುಗಿಸಿದ್ದಾರೆ.
2009ರಲ್ಲಿ ಕೆ.ಪಿ.ಎಸ್.ಸಿ ಮುಖಾಂತರ ಜಲ ಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ಆಯ್ಕೆ ಆಗಿದ್ದಾರೆ. ಪ್ರಸ್ತುತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀರಾವರಿ ಇಲಾಖೆಯಲ್ಲಿ ಬಡ್ತಿ ಹೊಂದಿದ್ದಾರೆ.
ಭ್ರಷ್ಟಾಚಾರದ ಮೂಲಕ ಹಣದ ಹೊಳೆಯೇ ಹರಿಯುವ ಇಲಾಖೆಯಲ್ಲಿ ಸಂತೋಷಕುಮಾರ ತೋಟ್ನಳ್ಳಿ ಅವರು ಕೆಲಸ ಮಾಡುತ್ತಿದ್ದರೂ ಸರಿ ಸುಮಾರು 15 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಆತ್ಮ ಸಾಕ್ಷಿಗೆ ಅನುಗುಣವಾಗಿ ಒಂದು ಪೈಸೆ ದುಡ್ಡನ್ನು ಸಹ ಭ್ರಷ್ಟಾಚಾರದ ರೂಪದಲ್ಲಿ ಪಡೆಯದೆ ಸತ್ಯ ಪ್ರಾಮಾಣಿಕತೆಗೆ ಒಂದು ಉದಾಹರಣೆಯನ್ನು ನೀಡುತ್ತಿದ್ದಾರೆ.
ಇಂತಹವರು ಮುಂದಿನ ಸಮಾಜದ, ದೇಶದ ಪೀಳಿಗೆಗೆ ಉದಾಹರಣೆ ಆಗಬೇಕು ಎನ್ನುವ ದೃಷ್ಟಿಕೋನದಿಂದ ಹಾಗೂ ಸಮಾಜದಲ್ಲಿ ದೇಶದಲ್ಲಿ ಸತ್ಯ ಪ್ರಾಮಾಣಿಕತೆ ಇನ್ನೂ ಬೆಲೆ ಇದೆ ಎನ್ನುವ ಭಾವನೆ ಮೂಡುವಂತಾಗಲು ಇಂತಹವರನ್ನು ಪ್ರೋತ್ಸಾಹಿಸಬೇಕು, ಗೌರವಿಸಬೇಕು ಎನ್ನುವ ಉದ್ದೇಶದಿಂದ ಇವರನ್ನು ಟ್ರಸ್ಟಿನ “ಸತ್ಯ ಯುಗಕ್ಕೆ ಅಡಿಗಲ್ಲಿನ ಸಾಧಕ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ಇನ್ನೂ ಕೆಲವೇ ದಿನಗಳಲ್ಲಿ ಟ್ರಸ್ಟಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದು ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ ಕಾರ್ಯದರ್ಶಿಗಳು ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್