Ad imageAd image

ನಿಸ್ವಾರ್ಥ ಕಾಯಕ ಸೇವೆಯಿಂದ ಶರಣರು ಚಿರಸ್ಥಾಯಿಗಳಾಗಿದ್ದಾರೆ : ಕುಂಞ ಅಹಮದ್

Bharath Vaibhav
ನಿಸ್ವಾರ್ಥ ಕಾಯಕ ಸೇವೆಯಿಂದ ಶರಣರು ಚಿರಸ್ಥಾಯಿಗಳಾಗಿದ್ದಾರೆ : ಕುಂಞ ಅಹಮದ್
WhatsApp Group Join Now
Telegram Group Join Now

ತುರುವೇಕೆರೆ: 12 ನೇ ಶತಮಾನದಲ್ಲಿ ದುರ್ಬಲ ವರ್ಗದ ಮೇಲಾಗುತ್ತಿದ್ದ ಶೋಷಣೆ, ಜಾತೀಯತೆ, ಮೇಲು ಕೀಳು ತಾರತಮ್ಯ, ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿ ಸರ್ವರಿಗೂ ಸಮಪಾಲು, ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರುಗಳು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಎಂದು ತಹಸೀಲ್ದಾರ್ ಕುಂಞ ಅಹಮದ್ ತಿಳಿಸಿದರು.

ತಾಲ್ಲೂಕು ಆಡಳಿತದಿಂದ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚರಿತ್ರೆಯಲ್ಲಿನ ಮಹನೀಯರು, ಶರಣರು ಚಾರಿತ್ರ್ಯ ಮತ್ತು ನಿಸ್ವಾರ್ಥ ಕಾಯಕ ಸೇವೆಯಿಂದ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಜಾತಿಯಿಂದ ದೊಡ್ಡವರಾಗಲು ಎಂದಿಗೂ ಸಾಧ್ಯವಿಲ್ಲ. ಬದುಕಿನಲ್ಲಿ ಅಳವಡಿಸಿಕೊಂಡ ನೈತಿಕತೆ, ಚಾರಿತ್ರ್ಯ, ನಿಸ್ವಾರ್ಥ ಸೇವೆ, ಸಮಾಜ ಹಿತ ಅವರನ್ನು ದೊಡ್ಡವರನ್ನಾಗಿಸುತ್ತದೆ ಎಂದರು.

ಬುದ್ದ, ಬಸವಣ್ಣ, ಅಂಬೇಡ್ಕರ್, ಕನಕದಾಸರು, ನಾರಾಯಣ ಗುರು, ಮಡಿವಾಳ ಮಾಚಿದೇವ ಸಹಿತ ಹಲವು ಮಹನೀಯರನ್ನು ಶತಮಾನ ಕಳೆದರೂ ಇಂದಿಗೂ ಸಮಾಜ ಅವರನ್ನು ಆರಾಧಿಸುತ್ತದೆ, ಗೌರವಿಸುತ್ತದೆ ಎಂದರೆ ಅದಕ್ಕೆ ಅವರ ಆದರ್ಶನೀಯ ವ್ಯಕ್ತಿತ್ವ, ಸಾಮಾಜಿಕ ಕಳಕಳಿ ಕಾರಣವಾಗಿದೆ. ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಸಮಾಜದ ವತಿಯಿಂದ ತಹಸೀಲ್ದಾರ್ ಕುಂಞ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ, ನಾಗರೀಕರು, ಮಡಿವಾಳ ಸಮುದಾಯ ಬಾಂದವರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
Share This Article
error: Content is protected !!