ಬೆಳಗಾವಿಯಲ್ಲಿ ಪರೀಕ್ಷೆಗೂ ಮುನ್ನವೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿ ಸಾವಿಗೆ ಸಚಿವ ಸತೀಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ ಅವರ ಅಕಾಲಿಕ ನಿಧನ ಸುದ್ದಿ ಮನಕಲಕುವಂತಾಗಿದೆ’ ಎಂದು ಹೇಳಿದ್ದಾರೆ.
‘ಪರೀಕ್ಷೆಯಂತಹ ಮಹತ್ವದ ಘಟ್ಟವನ್ನು ಎದುರಿಸಲು ಸಜ್ಜಾಗಿದ್ದ ಹೊತ್ತಲ್ಲೇ ವಿಧಿಯಾಟಕ್ಕೆ ಬಲಿಯಾದ ಭೂಮಿಕಾ ಅವರ ನಿಧನವು ಕುಟುಂಬಸ್ಥರು, ಬಂಧುಬಳಗ ಹಾಗೂ ಗ್ರಾಮಸ್ಥರಿಗೆ ತುಂಬಲಾರದ ನಷ್ಟವಾಗಿದೆ. ಇಷ್ಟು ಕಿರಿಯ ವಯಸ್ಸಿನಲ್ಲಿ ಜೀವಂತ ಕನಸುಗಳು ನಶಿಸಿರುವುದು ಅತ್ಯಂತ ದುಃಖಕರ’ ಎಂದು ಸಂತಾಪ ಸೂಚಿಸಿದ್ದಾರೆ.
‘ಈ ದುರ್ಘಟನೆ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಸಂದೇಶವೂ ಹೌದು – ಜೀವನವು ಯಾವುದೇ ಪರೀಕ್ಷೆಗಿಂತ ಅಮೂಲ್ಯ. ಯಾವುದೇ ಒತ್ತಡ ಅಥವಾ ಆತಂಕ ಎದುರಾದರೂ ಧೈರ್ಯದಿಂದ ಎದುರಿಸಬೇಕು. ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರೊಂದಿಗೆ ಮನದ ಮಾತು ಹಂಚಿಕೊಳ್ಳುವುದು ಅತ್ಯಂತ ಮುಖ್ಯ. ಸಂಕಷ್ಟದ ಹೊತ್ತಿನಲ್ಲಿ ಧೈರ್ಯವೇ ನಮ್ಮ ದೊಡ್ಡ ಶಕ್ತಿ’ ಎಂದು ಹೇಳಿದ್ದಾರೆ.
‘ಭೂಮಿಕಾ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ಅಸಹನೀಯ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಸಾಂತ್ವನ ಹೇಳಿದ್ದಾರೆ.




