ಬೆಂಗಳೂರು : ಸಚಿವ ಕೆ.ಎನ್. ರಾಜಣ್ಣ ಅವರ ವಿರುದ್ಧ ಹನಿಟ್ರ್ಯಾಪ್ ವಿಫಲ ಯತ್ನವಾಗಿದ್ದು, ಟ್ರ್ಯಾಪ್ ಹಿಂದಿನ ಆ ಮಹಾನಾಯಕನ್ನ ಪೊಲೀಸರೇ ತನಿಖೆ ಮಾಡಿ ಕಂಡು ಹಿಡಿಯಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಚಿವ ಹೆಚ್.ಸಿ.ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ರಾಜಣ್ಣ ಅವರು ದೂರು ನೀಡಿದ್ದಾರೆ.
ಹನಿಟ್ರ್ಯಾಪ್ ಹಿಂದೆ ಯಾರ ಕೈವಾಡವಿದೆ ಅಂತಾ ನಮಗೆ ಹೇಗೆ ಗೊತ್ತಾಗುತ್ತದೆ. ನಾವು ತನಿಖಾ ಸಂಸ್ಥೆ ಅಲ್ಲ. ನಮ್ಮಿಂದ ಆ ಪ್ರಭಾವಿ ನಾಯಕನನ್ನು ಪತ್ತೆ ಹಚ್ಚಲು ಆಗುವುದಿಲ್ಲ.
ಅದಕ್ಕೆ ಅಂತಾ ಪೊಲೀಸರು ಇದ್ದಾರೆ. ಅವರೇ ಹುಡುಕಲಿ. ಹನಿಟ್ರ್ಯಾಪ್ ಹಿಂದೆ ಯಾರ ಕೈವಾಡ ಇದೆ ಅಂತಾ ಈಗಲೇ ತಿಳಿಯಲ್ಲ. ತನಿಖೆ ಬಳಿಕವೇ ಗೊತ್ತಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಮಹಾದೇವಪ್ಪ ಪ್ರತಿಕ್ರಿಯೆ ನೀಡಿ, ಹನಿಟ್ರ್ಯಾಪ್ ಹಿಂದಿರುವ ಪ್ರಭಾವಿ ನಾಯಕ ಯಾರು ಅಂತಾ ನಾನಾಗಲಿ, ಜಾರಕಿಹೊಳಿಯಾಗಲಿ ಹೇಳಲು ಆಗಲ್ಲ. ನಮಗೆ ಗೊತ್ತೂ ಇಲ್ಲ. ತನಿಖೆ ನಂತರವೇ ನಿಜಾಂಶವೇನು ಎಂದು ತಿಳಿಯಲಿದೆ.
ಎಂಎಲ್ಸಿ ರಾಜೇಂದ್ರ ಅವರೂ ತಮ್ಮ ಕೊಲೆಗೆ ಸಂಚು ನಡೆದಿತ್ತು ಅಂತಾ ದೂರು ನೀಡಿದ್ದಾರೆ. ಆ ಬಗ್ಗೆಯೂ ತನಿಖೆ ಆರಂಭವಾಗಿದ್ದು, ಬಳಿಕವೇ ಸತ್ಯ ಗೊತ್ತಾಗಲಿದೆ ಎಂದು ಅಭಿಪ್ರಾಯಪಟ್ಟರು.