ಬೆಳಗಾವಿ: ಕಾಂಗ್ರೆಸ್ ನ ಪ್ರಬಲ ನಾಯಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೂತನ ಹೆಲಿಕಾಪ್ಟರ್ ಖರೀದಿ ಮಾಡಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದ್ದಾರೆ.
ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್‌ನಲ್ಲಿ ಶುಕ್ರವಾರ ನೂತನ ಹೆಲಿಕಾಪ್ಟರ್‌ನ್ನು ಪರಿಶೀಲಿಸಿದ ಸಚಿವರು, ಶೀಘ್ರವೇ ಇದು ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ ಎಂಬ ವಿಷಯವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಅವರು ಉತ್ತರಕರ್ನಾಟಕದಲ್ಲಿ ಸ್ವಂತ ಹೆಲಿಕಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಕೂಡಾ ಪಾತ್ರರಾಗಿರುವುದು ಗಮನಿಸಬೇಕಾದ ಸಂಗತಿ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮದೆ ಆದ ಅಭಿಮಾನ ಬಳಗವನ್ನು ಹೊಂದಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿದ್ದು ರಾಜ್ಯದಲ್ಲಿ ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ರಾಜ್ಯದ್ಯಂತ ಪಕ್ಷ ಸಂಘಟನೆ ಸೇರಿದಂತೆ 2028ರ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಈ ನೂತನ ಹೆಲಿಕಾಪ್ಟರ್ ಅನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪೂರಕವಾಗಿ ನೂತನ ಹೆಲಿಕಾಪ್ಟರ್ ಪರಿಶೀಲಿಸುತ್ತಿರುವ ಸಚಿವರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಇನ್ನು ಎರಡು ತಿಂಗಳಲ್ಲಿ ಈ ವಿಮಾನ ಹಾರಾಡಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿಕೊಂಡಿದ್ದಾರೆ.




