ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಮಾತು, ಸಿಎಂ ಅಧಿಕಾರದ ಹಂಚಿಕೆ ವಿಚಾರವಾಗಿ ಇತ್ತೀಚೆಗೆ ಯಾರೂ ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ನಾನು ಮುಂದಿನ ಬಾರಿ ಸಿಎಂ ಅಭ್ಯರ್ಥಿ ಅಂತಾ ಹೇಳಿದ್ದು ಬಿಟ್ಟರೆ ಯಾವುದೇ ಗೊಂದಲದ ಹೇಳಿಕೆ ನೀಡಿಲ್ಲ ಎಂದರು.
2028ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೇ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ತಂದೇ ತರುತ್ತೇವೆ. ಆಗ ನಾನೇ ಸಿಎಂ ಅಭ್ಯರ್ಥಿಯಾಗಿರುವೆ ಎಂದು ಘೋಷಿಸಿದರು.
ಸಿಎಂ ಮಾಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನೂ ಸಿಎಂ ಅಭ್ಯರ್ಥಿ ಎಂದಿರುವೆ ಹೊರತು, ನಾನೇ ಸಿಎಂ ಆಗುತ್ತೇನೆ ಅಂತಾ ಎಲ್ಲೂ ಹೇಳಿಲ್ಲ. ಸರ್ಕಾರ ಅಧಿಕಾರಕ್ಕೆ ತರಲು ಎಲ್ಲರ ಪಾತ್ರ ಇದ್ದೇ ಇದೆ. ಎಲ್ಲರ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.
ಇನ್ನು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಯಾವ ವೈಮನಸ್ಸು ಇಲ್ಲ. ಯಾವ ಭಿನ್ನಾಭಿಪ್ರಾಯಗಳೂ ಇಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು. ನಾನು ಆ ಬಗ್ಗೆ ಏನೂ ಹೇಳುವುದಿಲ್ಲ ಎಂದು ತಿಳಿಸಿದರು.