ಬೆಂಗಳೂರು: ರಾಜ್ಯ ರಾಜಕೀಯದ ಹಗ್ಗಾಜಗ್ಗಾಟಕ್ಕೆ ಕಾರಣವಾಗಿರುವ ಜಾತಿಗಣತಿ ವರದಿ ಮಂಡನೆ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ.
ಹಲವು ಸಮುದಾಯದ ನಾಯಕರು, ಸಚಿವರು ವರದಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜಾತಿಗಣತಿ ವರದಿ ಮಂಡನೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಜಾತಿಗಣತಿ ವರದಿ ಮಂಡನೆಗೆ ಇನ್ನು 1 ವರ್ಷ ಕಾಲ ಬೇಕಾಗುವುದು. ಇದು ಬಹಳ ಜಟಿಲವಾದ ಸಮಸ್ಯೆ ಆದ್ದರಿಂದ ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಲು ಕನಿಷ್ಠ 1 ವರ್ಷ ಬೇಕೆಂದು ವರದಿ ಮಂಡನೆಯನ್ನು ಮತ್ತಷ್ಟು ಕಾಲ ಮುಂದೂಡುವ ಮಾತುಗಳನ್ನಾಡಿದ್ದಾರೆ.
ಸಂಜಯನಗರ ನಿವಾಸದಲ್ಲಿ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು ಜಾತಿಗಣತಿಗೆ 10 ವರ್ಷ ಆಗಿದೆ. ಈಗ ಇದರ ಅಂಕಿ ಅಂಶಗಳ ಬಗ್ಗೆ ಪ್ರಶ್ನೆ ಉದ್ಬವಿಸಿದೆ.
ಆ ಪ್ರಶ್ನೆಗೆ ಉತ್ತರ ಕಂಡು ಕೊಳ್ಳಲು ಅದರ ಬಗ್ಗೆ ಚರ್ಚೆಯಾಗಬೇಕಿದೆ. ಕೆಲವೊಂದು ಸಮುದಾಯಗಳಿಗೆ ಈ ಅಂಕಿ ಅಂಶಗಳು ಸಮಾಧಾನ ತಂದಿರುವುದಿಲ್ಲ. ಅದನ್ನು ಸರಿಪಡಿಸಿ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.